ಕನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ನಿರೂಪಕಿ ಸುಷ್ಮಾ ಕೆ ರಾವ್ ಅವರು ಮೊದಲ ಬಾರಿಗೆ ತಮ್ಮ ಮುದ್ದು ಮಗ ಆರ್ಯ ಮಧುಕರ್ ಜೊತೆಗೆ ತೆಗೆದ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಅಮ್ಮ-ಮಗನ ಮುದ್ದಾದ ಫೋಟೋ ಅಭಿಮಾನಿಗಳ ಮನಗೆದ್ದು ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ಇಷ್ಟು ವರ್ಷಗಳಿಂದ ಕುಟುಂಬದ ಪ್ರೈವಸಿ ಕಾಯ್ದುಕೊಂಡಿದ್ದ ಸುಷ್ಮಾ ಅವರು ಇದೀಗ ಮಗನ ಜೊತೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳ ಪ್ರೀತಿ ತುಂಬಿ ಹರಿದಿದೆ.
“ಎಷ್ಟು ಕ್ಯೂಟ್ ಅಮ್ಮ-ಮಗ ಜೋಡಿ!” “ಮನೆ ಮೆಚ್ಚಿದ ಸೊಸೆ ರೀಯಲ್ ಲೈಫಲ್ಲೂ ಸೂಪರ್ ಅಮ್ಮ!” “ಮೊದಲ ಬಾರಿ ಕುಟುಂಬ ಫೋಟೋ ನೋಡಿ ತುಂಬಾ ಖುಷಿ ಆಯ್ತು.”“25 ವರ್ಷಗಳ ಸಾಧನೆಗೆ ಅಭಿನಂದನೆಗಳು ಮ್ಯಾಮ್!”
“ಆರ್ಯ ತುಂಬಾ ಮುದ್ದಾಗಿದ್ದಾನೆ… ದೇವರು ಆಶೀರ್ವದಿಸಲಿ.” ಎಂದು ಸಂಭ್ರಮಿಸಿದ್ದಾರೆ
ಪ್ರಸ್ತುತ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ “ಭಾಗ್ಯ” ಪಾತ್ರದ ಮೂಲಕ ಮನೆಮಾತಾಗಿರುವ ಸುಷ್ಮಾ ಅವರು ರೀಯಲ್ ಲೈಫಲ್ಲೂ ಒಳ್ಳೆಯ ಅಮ್ಮ, ಪತ್ನಿ ಮತ್ತು ಸೊಸೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಮ್ಮ-ಮಗನ ಈ ಮುದ್ದಾದ ಕ್ಷಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಹಾರೈಸುವ ಕಾಮೆಂಟ್ಗಳ ಸುರಿಮಳೆಯೇ ಸುರಿಯುತ್ತಿದೆ.
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸುಷ್ಮಾ ಅವರು “ಮನೆ ಮೆಚ್ಚಿದ ಸೊಸೆ” ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಅದೇ ಸಂದರ್ಭದಲ್ಲಿ ಮನರಂಜನಾ ಕ್ಷೇತ್ರದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಸನ್ಮಾನವೂ ನೀಡಲಾಯಿತು. ಆ ಕ್ಷಣವನ್ನು ಇನ್ನಷ್ಟು ವಿಶೇಷಗೊಳಿಸಲು ಪತಿ ಮಧುಕರ್ ಆದಿಮೂರ್ತಿ ಹಾಗೂ ಮಗ ಆರ್ಯ ಮಧುಕರ್ ಅವರನ್ನು ವೇದಿಕೆಗೆ ಕರೆತಂದಿದ್ದು ವೀಕ್ಷಕರಿಗೆ ಸರ್ಪ್ರೈಸ್ ಆಗಿತ್ತು. ಕಾರ್ಯಕ್ರಮದ ವೇಳೆ ಆರ್ಯ ಮುದ್ದಾಗಿ “ಅಮ್ಮ ಸ್ವಲ್ಪ ಸ್ಟ್ರಿಕ್ಟ್… ಜೊತೆಗೆ ಹೊಡಿತಾರೆ” ಎಂದು ತಮಾಷೆ ಮಾಡಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸುಷ್ಮಾ ಅವರ ಪತಿ ಮಧುಕರ್ ಆದಿಮೂರ್ತಿ ಪ್ರೈವಸಿ ಇಷ್ಟಪಡುವ ವ್ಯಕ್ತಿ. ಕುಟುಂಬದ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಸಲಹೆ ನೀಡಿದ್ದರಿಂದ ಇಷ್ಟರ ತನಕ ಸುಷ್ಮಾ ಅವರು ಪತಿ-ಮಗನ ಚಿತ್ರಗಳನ್ನು ಶೇರ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮಗನ ಜೊತೆಗಿನ ಸೆಲ್ಫಿಯನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವುದು ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.
ಸುಷ್ಮಾ ಅವರು ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಭಗೀರಥಿ, ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ, ಯಾವ ಜನ್ಮದ ಮೈತ್ರಿ, ಬಿದಿಗೆ ಚಂದ್ರಮ, ಬೆಟ್ಟದ ಹೂವು ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಕೂಚಿಪುಡಿ ನೃತ್ಯದಲ್ಲಿ ಪರಿಣತಿ ಹೊಂದಿರುವ ಸುಷ್ಮಾ ಅವರಿಗೆ ಆರಂಭದಲ್ಲಿ ಸಿನಿಮಾ ಕ್ಷೇತ್ರದ ಆಸಕ್ತಿ ಇರಲಿಲ್ಲವಂತೆ. ತಂದೆಯ ಕನಸಿಗಾಗಿ ದೊಡ್ಡ ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಕಲೆಪಯಣ ಆರಂಭಿಸಿದರು. ತಾಯಿಯ ಇಚ್ಛೆಯನ್ನು ಗೌರವಿಸಿ ಸಿನಿಮಾ ಬದಲು ಕಿರುತೆರೆಯನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ರೀಯಲ್ ಲೈಫ್ನಲ್ಲೂ ಒಳ್ಳೆಯ ಸೊಸೆ, ಪತ್ನಿ ಮತ್ತು ಮಗಳಾಗಿ ಜೀವನ ಸಾಗಿಸುತ್ತಿರುವ ಸುಷ್ಮಾ ಕೆ ರಾವ್ ತಮ್ಮ ಸರಳತೆ, ನಗು ಮತ್ತು ಸ್ನೇಹಭಾವದಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.