ಮಂಗಳೂರು ನವೆಂಬರ್ 16: ಸಹಕಾರರಂಗ ದೇಶದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನರಿಗೆ ಶಕ್ತಿ ನೀಡಿದೆ. ದೇಶದ ಅಭಿವೃದ್ಧಿಗೆ ಸಹಕಾರರಂಗ ಅಪಾರ ಕೊಡುಗೆ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ಎಂಬ ದ್ಯೇಯ ವಾಕ್ಯ ದೊಂದಿಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ಹಮ್ಮಿಕೊಂಡ 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದ ಜನರ, ಮಹಿಳೆಯರ ಸ್ವಾವಲಂಬನೆ ಗೆ ದೇಶಾದ್ಯಂತ ವ್ಯಾಪಿಸಿರುವ ಸಹಕಾರ ಸಂಸ್ಥೆಗಳು ಕೊಡುಗೆ ನೀಡಿದೆ. ಧ್ವನಿ ಇಲ್ಲದವರಿಗೆ, ದುರ್ಬಲರಿಗೆ ಶಕ್ತಿ ನೀಡಿದೆ. ಕರಾವಳಿಯಲ್ಲಿ ಮಹಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕಿದ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರ ನೇತೃತ್ವದ ಸಹಕಾರಿ ಬ್ಯಾಂಕ್ ಸಾಲ ನೀಡಿ ಹಲವು ಸಂಸ್ಥೆಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈ ಸಹಕಾರ ರಂಗ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ವಾಗತಿಸಿ ಮಾತನಾಡುತ್ತಾ, ಸಹಕಾರ ಬ್ಯಾಂಕ್ ಜಿಲ್ಲೆಯ ಜನರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಾಟಿಯಾಗಿ ರೈತರ ಆರ್ಥಿಕ ಅಗತ್ಯ ಗಳಿಗೆ ಶಿಕ್ಷಣ, ಮದುವೆ ಸೇರಿದಂತೆ ತುರ್ತು ಅಗತ್ಯ ಗಳಿಗೆ ಸ್ಪಂದಿಸಿದೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ಎಂಬ ಧೈಯವಾಕ್ಯದೊಂದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಸಪ್ತಾಹದ ಆಚರಣೆಯ ಸಂದರ್ಭದಲ್ಲಿ “ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿ ಸುವುದು” ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಸಹಕಾರ ಸಪ್ತಾಹದ ಸಮಾರಂಭದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ವೈವಿಧ್ಯತೆ ಯನ್ನೊಳಗೊಂಡ ವರ್ಣ ರಂಜಿತ ಮೆರವಣಿಗೆ ನಡೆಯಿತು.



