ಪುತ್ತೂರು ಮೇ 05: ಸುಬ್ರಹ್ಮಣ್ಯ–ಮಂಜೇಶ್ವರ ಹೆದ್ದಾರಿಯ ಸವಣೂರು ಸಮೀಪದ ಚಾಪಳ್ಳ ತಿರುವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಮಿತ್ತೂರು ಗ್ರಾಮದ ಯಜ್ಞೇಶ್ (21) ಹಾಗೂ ಪುತ್ತೂರು ತಾಲ್ಲೂಕಿನ ಪಾಣಾಜೆ ಗ್ರಾಮದ ಜಗನ್ (20) ಮೃತಪಟ್ಟ ದುರ್ದೈವಿಗಳು. ಜಗನ್ ಅವರು ಪುತ್ತೂರಿನ ಅಕ್ಷಯ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದು, ಇಂಟರ್ನ್ಷಿಪ್ಗಾಗಿ ಆಸ್ಟ್ರೇಲಿಯಾಕ್ಕೆ ಹೋಗಿ ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು.

ಯುವಕರಿಬ್ಬರು ಕೆಲಸದ ನಿಮಿತ್ತ ಆಲಂಕಾರಿಗೆ ತೆರಳಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಚಾಪಳ್ಳ ತಿರುವಿನಲ್ಲಿ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಸ್ಕೂಟರ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಟ್ಯಾಂಕರ್ ಚಾಲಕ ವಾಹನವನ್ನು ಎಡಕ್ಕೆ ತಿರುಗಿಸಿದಾಗ ಬೈಕ್ ಟ್ಯಾಂಕರ್ನ ಚಕ್ರದಡಿಗೆ ಸಿಲುಕಿದೆ. ಬಳಿಕ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬೈಕ್ ಸವಾರರು ಅಪಘಾತ ಕಂಡು ಗಾಬರಿಯಿಂದ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.