ರಿಯಾದ್: ಗಲ್ಫ್ ರಾಷ್ಟ್ರಗಳ ಇಂಧನ ಸ್ಥಾವರಗಳ ಮೇಲೆ ಇರಾನ್ ನಡೆಸುತ್ತಿರುವ ಸರಣಿ ದಾಳಿಗಳ ಬಗ್ಗೆ ಸೌದಿ ಅರೇಬಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ನಮ್ಮ ಸಹಿಷ್ಣುತೆ ಅಪರಿಮಿತವಲ್ಲ, ಇರಾನ್ ತಕ್ಷಣವೇ ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕು” ಎಂದು ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಎಚ್ಚರಿಸಿದ್ದಾರೆ.

ಬುಧವಾರ ರಿಯಾದ್ನಲ್ಲಿ ನಡೆದ ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ತುರ್ತು ಸಭೆಯ ನಂತರ ಮಾತನಾಡಿದ ಅವರು, ಇರಾನ್ನ ಈ ದಾಳಿಗಳು ಆಕಸ್ಮಿಕವಲ್ಲ, ಬದಲಾಗಿ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ ಸಂಚು ಎಂದು ಆರೋಪಿಸಿದರು. ಕತಾರ್ನ ರಾಸ್ ಲಫಾನ್ ಮತ್ತು ಯುಎಇಯ ಹಬ್ಶಾನ್ ಅನಿಲ ಸ್ಥಾವರಗಳ ಮೇಲೆ ನಡೆದ ದಾಳಿಗಳು ಇರಾನ್ನ ಪೂರ್ವಯೋಜಿತ ಕೃತ್ಯಗಳಾಗಿವೆ ಎಂದು ಅವರು ತಿಳಿಸಿದರು.
ಸೌದಿ ಅರೇಬಿಯಾ ಮತ್ತು ಅದರ ಪಾಲುದಾರ ರಾಷ್ಟ್ರಗಳು ಅತ್ಯಂತ ಬಲಿಷ್ಠವಾದ ರಕ್ಷಣಾ ಸಾಮರ್ಥ್ಯವನ್ನು ಹೊಂದಿವೆ. “ನಾವು ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದು ಇರಾನ್ಗೆ ಬುದ್ಧಿವಂತಿಕೆಯಲ್ಲ” ಎಂದು ಪ್ರಿನ್ಸ್ ಫೈಸಲ್ ಗುಡುಗಿದ್ದಾರೆ. ಇರಾನ್ ತನ್ನ ನೆರೆಹೊರೆಯವರ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.