ಸೌದಿ ಡಿಸೆಂಬರ್ 30: ಯೆಮೆನ್ ಬಂದರು ಮೇಲೆ ಸೌದಿ ಅರೇಬಿಯಾ ವೈಮಾನಿಕ ದಾಳಿ ನಡೆಸಿದ್ದು, ಇಂದು ಯುಎಇ ಕಣ್ಣು ಕೆಂಪಾಗಿಸಿದ್ದು, ಇದೀಗ ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿ ಹದಗೆಡುವಂತೆ ಮಾಡಿದೆ.
ಯೆಮೆನ್‌ನ ಬಂದರು ನಗರವಾದ ಮುಕಲ್ಲಾ ಮೇಲೆ ಸೌದಿ ಅರೇಬಿಯಾ ಮಂಗಳವಾರ ವೈಮಾನಿಕ ದಾಳಿ ನಡೆಸಿದೆ. ಯುಎಇ ಬೆಂಬಲಿತ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್ (ಎಸ್‌ಟಿಸಿ) ಗಾಗಿ ಮೀಸಲಿಟ್ಟ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಬಾಂಬ್ ದಾಳಿಯ ಬಳಿಕ ಯೆಮೆನ್ ಅಧ್ಯಕ್ಷೀಯ ಮಂಡಳಿಯು ಯುಎಇ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿದೆ. Southern Transitional Council (STC) ಹೆಸರಿನ ರಾಜಕೀಯ ಸಂಘಟನೆ 2017 ರಲ್ಲಿ ರಚನೆಯಾಗಿದ್ದು ದಕ್ಷಿಣ ಯೆಮೆನ್‌ನಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಈ ಸಂಘಟನೆಗೆ ಯುಎಇ ಬೆಂಬಲ ನೀಡುತ್ತಿದೆ. ಈ ಎಸ್‌ಟಿಸಿ ಇತ್ತೀಚಿಗೆ ಪೂರ್ವ ಯೆಮೆನ್‌ನಲ್ಲಿರುವ ತೈಲ ಸಮೃದ್ಧ ಹದ್ರಾಮೌಟ್ ಮತ್ತು ಅಲ್ ಪ್ರಾಂತ್ಯಗಳನ್ನು ವಶಕ್ಕೆ ಪಡೆದಿತ್ತು.
ಎಸ್‌ಟಿಸಿಗೆ ಬಲ ತುಂಬಲು ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು. ಶಸ್ತ್ರಾಸ್ತ್ರ ಕಳುಹಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಸೌದಿ ಅರೇಬಿಯಾ ಈಗ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿರುವ ಮುಕಲ್ಲಾ ನಗರದ ಮೇಲೆಯೇ ಬಾಂಬ್ ದಾಳಿ ನಡೆಸಿದೆ.
ಇದರೊಂದಿಗೆ ಇದೀಗ ಸೌದಿ ಮತ್ತು ಯುಎಇ ನಡುವಿನ ಪರಿಸ್ಥಿತಿ ಹದಗೆಟ್ಟಿದೆ. ಯೆಮೆನ್‌ನ ದಶಕಗಳ ಯುದ್ಧದಲ್ಲಿ ವಿವಿಧ ಗುಂಪುಗಳನ್ನು ಬೆಂಬಲಿಸುತ್ತಿರುವ ನಿಕಟ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುಎಇ ನಡುವೆ ಹೆಚ್ಚುತ್ತಿರುವ ಘರ್ಷಣೆಯನ್ನು ಈ ದಾಳಿಯು ತೋರಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.



