LATEST NEWS
ನನ್ನ ಹತ್ಯೆಯಾದರೆ ಅದಕ್ಕೆ ಬಿಜೆಪಿ ರಾಜ್ಯಧ್ಯಕ್ಷ ಮತ್ತು ಅವರ ತಂಡ ಹೊಣೆ – ಸತ್ಯಜಿತ್ ಸುರತ್ಕಲ್

ಮಂಗಳೂರು ಎಪ್ರಿಲ್ 21: ನನಗೆ ನೀಡಲಾಗಿರುವ ಭದ್ರತೆಯನ್ನು ಸರಕಾರ ಹಿಂತೆಗೆದುಕೊಂಡಿದ್ದು, ಈ ಮೂಲಕ ನನ್ನ ಹತ್ಯೆಗೆ ವ್ಯವಸ್ಥಿತ ಸಂಚು ನಡೆಯುತ್ತಿದೆ. ಒಂದು ವೇಳೆ ಹತ್ಯೆಯಾದರೆ ಅದಕ್ಕೆ ಬಿಜೆಪಿ ರಾಜ್ಯಧ್ಯಕ್ಷ ಮತ್ತು ಅವರ ತಂಡ ಹೊಣೆ ಎಂದು ಹಿಂದೂಪರ ಹೋರಾಟಗಾರರ ಮುಖಂಡ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಸುಮಾರು 16 ವರ್ಷಗಳಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದ ಕಾರಣಕ್ಕೋಸ್ಕಕ್ಕೋಸ್ಕರ ಸರಕಾರವೇ ನನಗೆ ಭದ್ರತೆ ನೀಡಿತ್ತು. ಆದರೆ ಕಳೆದ ಹದಿನಾರು ವರ್ಷಗಳಿಂದ ಇದ್ದ ಭದ್ರತೆಯನ್ನು ಈಗ ಚುನಾವಣೆ ನೆಪದಲ್ಲಿ ವಾಪಸ್ ಪಡೆಯಲಾಗಿದೆ. ಈ ಮೂಲಕ ನನ್ನ ಹತ್ಯೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಹಿಂದುತ್ವಕ್ಕಾಗಿ ರಾಷ್ಟ್ರ ಹಿತಕ್ಕಾಗಿ ನಡೆಸಿದ ಕಾರ್ಯಗಳಿಂದಾಗಿ ಬೆದರಿಕೆ ಬಂದಿತ್ತೆ ಹೊರತು ನನ್ನ ವೈಯಕ್ತಿಕ ವಿಷಯಕ್ಕಾಗಿ ಅಲ್ಲ ಎಂದರು. ಇದೀಗ ಮೊತ್ತ ಮೊದಲ ಬಾರಿಗೆ ಯಾವುದೇ ಸೂಚನೆ ನೀಡದೇ ನನ್ನ ಭದ್ರತೆಯನ್ನು ಸರಕಾರ ವಾಪಾಸ್ ತೆಗೆದುಕೊಂಡಿದೆ. ಭದ್ರತೆ ವಾಪಾಸ್ ನೀಡಬೇಕೆಂದು ಅನೇಕ ಕಡೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
ಆದರೂ ಇನ್ನೂ ನೀಡಿಲ್ಲ. ಶುಲ್ಕ ಪಾವತಿಸಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಷ್ಟು ಸಶಕ್ತನಾಗದೇ ಇರುವುದರಿಂದ ಹಾಗೂ ಈಗಲೂ ಬೆದರಿಕೆ ಇರುವುದರಿಂದ ಇದನ್ನು ಮುಂದುವರಿಸಬೇಕು ಎಂದು ಹಿಂದೂ ಹೋರಾಟಗಾರ, ಬಿಲ್ಲವ ನಾಯಕ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ.

ಆಕಸ್ಮಾತ್ ದುಷ್ಕರ್ಮಿಗಳ ಕೈಗೆ ಸಿಕ್ಕಿ ಬಲಿಯಾದರೆ ಅದಕ್ಕೆ ನೇರ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಆತನ ತಂಡ ಮತ್ತು ದುಡ್ಡು ಕೊಟ್ಟು ಗನ್ ಮ್ಯಾನ್ ಪಡೆದುಕೊಳ್ಳಿ ಎಂದು ಹೇಳಿದ ನಿರ್ಣಯ ಸಮಿತಿ ಹೊಣೆಯಾಗಿದೆ ಎಂದರು.
ನನ್ನ ಹತ್ಯೆ ನಡೆದರೆ ಯಾರೂ ಕೂಡಾ ನನ್ನ ಶವ ದರ್ಶನಕ್ಕೆ ಬರಬಾರದು. ನನ್ನ ಮೆರವಣಿಗೆ ನಡೆಸಬಾರದು. ಅದೇನೇ ಆದರೂ ನಾವು ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ. ಇಂದು ಹಿಂದುತ್ವದ ನೈಜ ಹೋರಾಟಗಾರರಿಗೆ ಇಂದು ಬೆಲೆ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.