ಮಧುರೈ ಎಪ್ರಿಲ್ 06: ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ತೂತುಕುಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಅವರ ಕಸ್ಟಡಿ ಸಾವು ಪ್ರಕರಣದಲ್ಲಿ ಒಂಬತ್ತು ಪೊಲೀಸರಿಗೆ ಮಧುರೈ ಜಿಲ್ಲಾ ನ್ಯಾಯಾಲಯವು ಸೋಮವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್, ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಇದು ‘ಅಧಿಕಾರ ದುರುಪಯೋಗದ ಪರಮಾವಧಿ’ ಎಂದು ಬಣ್ಣಿಸಿದ ನ್ಯಾಯಾಧೀಶರು, “ತಂದೆ ಮತ್ತು ಮಗನನ್ನು ವಿವಸ್ತ್ರಗೊಳಿಸಿ ನಿರ್ದಯವಾಗಿ ಹಲ್ಲೆ ನಡೆಸಿದ ರೀತಿಯನ್ನು ಓದಿದರೆ ಹೃದಯ ನಡುಗುತ್ತದೆ” ಎಂದು ವಿಷಾದಿಸಿದರು. ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ, ಆದರೆ ಇಂತಹ ಕೃತ್ಯ ಎಸಗುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯಾಗಲಿದೆ ಎಂದು ನ್ಯಾಯಾಲಯ ಸಮರ್ಥಿಸಿಕೊಂಡಿದೆ.
2020ರ ಜೂನ್ 19ರಂದು ಕೋವಿಡ್ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಸತಾನಕುಲಂ ಪೊಲೀಸರು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ರಾತ್ರಿಯಿಡೀ ಅಮಾನವೀಯವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರ ದೈಹಿಕ ದೌರ್ಜನ್ಯದಿಂದಾಗಿ ಗುದನಾಳದ ರಕ್ತಸ್ರಾವ ಸಂಭವಿಸಿ, ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು.

ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ, ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ವಾದಿಸಿತ್ತು. ಠಾಣೆಯಲ್ಲಿದ್ದ ಮಹಿಳಾ ಕಾನ್ಸ್ಟೆಬಲ್ ಒಬ್ಬರು ನೀಡಿದ ಸಾಕ್ಷ್ಯವು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಠಾಣೆಯ ಟೇಬಲ್ಗಳು ಮತ್ತು ಲಾಠಿಗಳ ಮೇಲೆ ರಕ್ತದ ಕಲೆಗಳಿದ್ದವು ಎಂಬುದು ತನಿಖೆಯಿಂದ ದೃಢಪಟ್ಟಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರೂ, 100ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ ಸಿಬಿಐ ಆರೋಪ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಆರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಸಿಕ್ಕಿರುವ ಈ ತೀರ್ಪು, ಪೊಲೀಸ್ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ಸಂದ ಜಯ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬಣ್ಣಿಸಿದ್ದಾರೆ.
ದೇಶದಲ್ಲೇ ಒಂದು ಪ್ರಕರಣದಲ್ಲಿ ಇಷ್ಟು ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.