ಬೆಂಗಳೂರು, ಏಪ್ರಿಲ್ 18: ಮದ್ಯದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟನಹಳ್ಳಿಯ ಕೆರೆಯ ಬಳಿ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಮೋಹನ್ (25) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ಮೋಹನ್ ಹಾಗೂ ಆರೋಪಿ ಮನೋಜ್ ಇಬ್ಬರೂ ಬಾಲ್ಯದ ಸ್ನೇಹಿತರಾಗಿದ್ದು, ಗುರುವಾರ ಸಂಜೆ ಪಾರ್ಟಿ ಮಾಡುವ ಉದ್ದೇಶದಿಂದ ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆಯ ನಿರ್ಜನ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ. ಅಲ್ಲಿ ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ಹಳೆಯ ವೈಷಮ್ಯದ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ನಶೆ ಏರಿದ್ದ ಮನೋಜ್, ಕೋಪೋದ್ರಿಕ್ತನಾಗಿ ಅಲ್ಲೇ ಬಿದ್ದಿದ್ದ ಬೃಹತ್ ಗಾತ್ರದ ಕಲ್ಲನ್ನು ಮೋಹನ್ ತಲೆಯ ಮೇಲೆ ಎತ್ತಿಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮೋಹನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವೆ ಇದ್ದ ಮನಸ್ತಾಪವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಯೋಜಿತ ಸಂಚಿನಂತೆ ಪಾರ್ಟಿಯ ನೆಪದಲ್ಲಿ ಮೋಹನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದ ಮನೋಜ್, ಸಮಯ ಸಾಧಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಗೆ ಚುರುಕು ಮುಟ್ಟಿಸಿದ್ದಾರೆ.
ಸದ್ಯ ಕೊಲೆ ಆರೋಪಿ ಮನೋಜ್ನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.