ಕೋಟ ಜನವರಿ 18: ಸಾಲಿಗ್ರಾಮ ಜಾತ್ರೆ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ನಡೆದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಾಲಿಗ್ರಾಮದಲ್ಲಿ ಜನವರಿ 16ರಂದು ರಾತ್ರಿ ಸಂಭವಿಸಿದೆ.

ಮೃತರನ್ನು ಆರೂರು ಗ್ರಾಮದ ಕುಂಜಾಲು ನಿವಾಸಿ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಆಚಾರ್ಯ (40)ಮೃತ ಎಂದು ಗುರುತಿಸಲಾಗಿದ್ದು, ರಾಯಚೂರು ನಿವಾಸಿ ಶಶಿ (25) ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರು, ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಚಾಲಕ ಬಳಿಕ ತನ್ನ ಕಾರನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾದನು ಎನ್ನಲಾಗಿದೆ.
ಪ್ರದೀಪ್ ಆಚಾರ್ಯ ಹಾಗೂ ಶಶಿ ಒಟ್ಟಿಗೆ ಇಂಟೀರಿಯರ್ ಕೆಲಸ ನಿರ್ವಹಿಸುತ್ತಿದ್ದು ಪ್ರದೀಪ್ ಅವರ ಕಾರಿನಲ್ಲಿ ಜಾತ್ರೆಗೆ ಆಗಮಿಸಿದ್ದರು. ಹಬ್ಬದಲ್ಲಿ ತಿರುಗಾಡಿ ಬಳಿಕ ರಾತ್ರಿ ವೇಳೆ ಮನೆಗೆ ತೆರಳಲು ಇಲ್ಲಿನ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ಈಕೋ ಕಾರು ಇವರಿಬ್ಬರಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ತೀವೃ ಗಾಯಗೊಂಡವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಾಗ ಪ್ರದೀಪ್ ಆಚಾರ್ಯ ಮೃತಪಟ್ಟಿದ್ದು ಶಶಿ ಗಂಭೀರ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವೆಸಗಿದ ಕಾರು ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದು ಅನಂತರ ಕೋಟ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.