ಸಕಲೇಶಪುರ, ಜೂನ್ 27: ಸಾರಿಗೆ ಸೌಲಭ್ಯ ವಿಲ್ಲದ ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರಲು ಶಿಕ್ಷಕರಿಬ್ಬರು ತಮ್ಮ ಸ್ವಂತ ಹಣದಿಂದ ಕಾರು ಖರೀದಿಸಿದ್ದಾರೆ.
ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಹಳೆಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೆಂಪೆನಾಲ್ ಗ್ರಾಮದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇಲ್ಲ. ಮಕ್ಕಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹೋಗಬೇಕು. ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದ್ದು ಮಕ್ಕಳು ಶಾಲೆಗೆ ಬರಲು ಭಯ ಪಡುತ್ತಾರೆ. ಹಾಗಾಗಿ ಕೆಲವು ಪೋಷಕರು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳಿಸುತ್ತಿಲ್ಲ.
ಈ ಶಾಲೆಯಲ್ಲಿ 16 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಕಾಡಾನೆ ಸಮಸ್ಯೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಶಿಕ್ಷಕ ಲೋಕೇಶ್ ಹಾಗೂ ವೈ.ಎಸ್. ತಮ್ಮಣ್ಣಶೆಟ್ಟಿ ಸೇರಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಕೆಂಪೆನಾಲ್ ಹಾಗೂ ಆ ಭಾಗದಿಂದ ಬರುವ ಮಕ್ಕಳನ್ನು ಆ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಶಿಕ್ಷಣ ಇಲಾಖೆಯ ಅಧಿಕಾರಿ ಗಂಗಾಧರ್, ಕುಶವಂತ್, ನಿರಂಜನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರ ಸುಮ್ಮುಖದಲ್ಲಿ ಗುರುವಾರ ಮಕ್ಕಳನ್ನು ಕರೆ ತರುವ ಕಾರು ಸೇವೆಗೆ ಚಾಲನೆ ನೀಡಲಾಯಿತು.
‘ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವುದೇ ಕಷ್ಟ. ಕಾಡಾನೆ ಸಮಸ್ಯೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಅದರಲ್ಲೂ ದಾಖಲಾಗಿರುವ ಮಕ್ಕಳೂ ಗೈರಾದರೆ ಶಾಲೆ ಮುಚ್ಚಬೇಕಾಗುತ್ತದೆ. ಸರ್ಕಾರಿ ಶಾಲೆ ಮುಚ್ಚದಂತೆ ಹಾಗೂ ಈ ಶಾಲೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಬೇಕು ಎಂಬ ಉದ್ದೇಶದಿಂದ ಮಕ್ಕಳನ್ನು ಶಾಲೆಗೆ ಕರೆತರಲು ಸ್ವಂತ ಹಣದಿಂದ ಕಾರು ಖರೀದಿ ಮಾಡಿ ಶಾಲೆಗೆ ಬಿಟ್ಟಿದ್ದೇವೆ. ಈ ಕಾರಿಗೆ ನಾವೇ ಚಾಲಕರು. ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತೇವೆ. ಶಾಲೆ ಮುಗಿದ ಬಳಿಕ ಮತ್ತೆ ಮನೆಗೆ ತಲುಪಿಸುತ್ತೇವೆ’ ಎಂದು ಶಿಕ್ಷಕ ಲೋಕೇಶ್ ಹಾಗೂ ವೈ.ಎಸ್. ತಮ್ಮಣ್ಣಶೆಟ್ಟಿ ಹೇಳಿದರು. ಶಿಕ್ಷಕರೇ ಸ್ವಂತ ಹಣದಿಂದ ಕಾರು ಖರೀದಿಸಿ, ಮಕ್ಕಳನ್ನು ಶಾಲೆಗೆ ಕರೆತರುವ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲಿಯೇ ಮೊದಲು.