ಮಂಗಳೂರು ಜೂನ್ 19: ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ರೈಲ್ವೇ ಸಂಪರ್ಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿರುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವು ಜೂನ್ ಕೊನೆಯ ವಾರದಲ್ಲಿ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ನಡೆಯುವ ಸಾಧ್ಯತೆಯಿದೆ. ರೈಲ್ವೇ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯು (RDSO) ಈ ಹೈಟೆಕ್ ಕಾರ್ಯಾಚರಣೆಯ ನೇತೃತ್ವ ವಹಿಸಿದೆ.

ಹಾಸನ-ಮಂಗಳೂರು ರೈಲು ಮಾರ್ಗದ ಅತ್ಯಂತ ಕಡಿದಾದ 55 ಕಿಲೋಮೀಟರ್ ಉದ್ದದ ಈ ಘಾಟ್ ವಿಭಾಗದಲ್ಲಿ ರೈಲ್ವೇ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ಎಲ್ಲಾ ರೈಲುಗಳು ಗರಿಷ್ಠ 30 ಕಿ.ಮೀ ವೇಗದಲ್ಲಿ ಚಲಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ, ಘಾಟ್ ವಿಭಾಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ರೈಲಿಗೆ ವಿಶೇಷ ಸ್ವಯಂಚಾಲಿತ ತುರ್ತು ಬ್ರೇಕಿಂಗ್ (Automatic Emergency Braking – AEB) ವ್ಯವಸ್ಥೆಯನ್ನು ಹೊಂದಿರಬೇಕು ಎಂದು ರೈಲ್ವೇ ಸಚಿವಾಲಯ ಷರತ್ತು ವಿಧಿಸಿದೆ. ರೈಲು ನಿಗದಿತ 30 ಕಿ.ಮೀ ವೇಗ ಮೀರಿದರೆ, ಈ ವ್ಯವಸ್ಥೆಯು ಆಟೋಮ್ಯಾಟಿಕ್ ಆಗಿ ವೇಗವನ್ನು ನಿಯಂತ್ರಣಕ್ಕೆ ತರುತ್ತದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಈ ವಿಶೇಷ ರೇಕ್ ಸಿದ್ಧವಾಗುತ್ತಿದ್ದು, ಮುಂದಿನ ವಾರ ನೈಋತ್ಯ ರೈಲ್ವೆಗೆ ಹಸ್ತಾಂತರವಾಗಲಿದೆ ಎಂದು ಮೈಸೂರು ವಿಭಾಗದ ಡಿಆರ್ಎಂ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಜೂನ್ ಎರಡನೇ ವಾರದಿಂದಲೇ ಘಾಟ್ ವಿಭಾಗದಲ್ಲಿ ಆರ್ಡಿಎಸ್ಒ ಮೂರು ವಿಭಿನ್ನ ಕೋಚ್ಗಳ ಪ್ರಾಯೋಗಿಕ ಪರೀಕ್ಷೆಯನ್ನು ಹಮ್ಮಿಕೊಂಡಿದೆ. ಈ ಪೈಕಿ ಐಸಿಎಫ್ (ICF) ಬೋಗಿಗಳ ಪೂರ್ಣ ರೈಲಿನೊಂದಿಗೆ 5 ದಿನಗಳಲ್ಲಿ ಒಟ್ಟು 5 ಟ್ರಿಪ್ಗಳ ಪ್ರಾಯೋಗಿಕ ರನ್ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಚಿವಾಲಯಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಕೆಯಾಗಲಿದೆ. ಪ್ರಸಕ್ತ ವಾರದ ಅಂತ್ಯದ ವೇಳೆಗೆ ಎರಡನೇ ಹಂತವಾಗಿ ಎಲ್ಎಚ್ಬಿ (LHB) ರೇಕ್ ಬಳಸಿ ಪರೀಕ್ಷೆಗಳು ನಡೆಯಲಿವೆ. ಇದಾದ ಬಳಿಕ ಅಂತಿಮವಾಗಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ಕೋಚ್ಗಳ ರೇಕ್ ಪ್ರಾಯೋಗಿಕ ಓಟ ನಡೆಸಲಿದೆ.
ರೈಟ್ಸ್ (RITES) ಸಂಸ್ಥೆಯು 2025ರ ಡಿಸೆಂಬರ್ 28 ರಂದು ಈ ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಪ್ರಸ್ತುತ ನಡೆಯುತ್ತಿರುವ ಈ ಎಲ್ಲಾ ಹಂತದ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದ ನಂತರ, ಈ ವಿಭಾಗದಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್ ರೈಲುಗಳ ಸಂಚಾರಕ್ಕೆ ಅಧಿಕೃತ ಗ್ರೀನ್ ಸಿಗ್ನಲ್ ಸಿಗಲಿದ್ದು, ಇದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸಲು ರಾಜಮಾರ್ಗ ಕಲ್ಪಿಸಲಿದೆ.