ಬಂಟ್ವಾಳ,ಮಾರ್ಚ್ 17: ಗ್ರಾಮೀಣ ರೈತರಿಗೆ ಮಹತ್ವದ ನೆರವಾಗಿರುವ ಸಜೀಪ ಮುನ್ನೂರು ಮತ್ತು ಸಜೀಪ ಮೂಡ ಏತ ನೀರಾವರಿ ಯೋಜನೆಗಳ ಪೈಪ್ ಲೈನ್ ವಿಸ್ತರಣೆಗೆ ತಲಾ 23 ಲಕ್ಷ ರೂ. ಅನುದಾನ ಮಂಜೂರಾಗಿದೆ.

ಈ ಯೋಜನೆಗಳು 90 ಹೆಚ್ಪಿ ಪಂಪ್ ಸೆಟ್ಗಳ ಮೂಲಕ ನೆತ್ರಾವತಿ ನದಿಯಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಸ್ಥಳೀಯ ರೈತರ ಬೇಡಿಕೆಯಂತೆ ಹೆಚ್ಚುವರಿ ಜಮೀನಿಗೆ 200 ಮಿ.ಮೀ ಪೈಪ್ ಲೈನ್ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ.
ಇತ್ತೀಚೆಗೆ, ಏತನೀರಾವರಿ ಯೋಜನೆಯ ಫಲಾನುಭವಿಗಳು ಸಜೀಪಮುನ್ನೂರು ಗ್ರಾಮದ ಮಡಿವಾಳ ಪಡ್ಪು ಕೂಸನಕಟ್ಟೆ ಪಂಪ್ ಹೌಸ್ ಬಳಿ ಸಭೆ ನಡೆಸಿ, ಯೋಜನೆಯ ಸೌಲಭ್ಯ ವಿಸ್ತರಣೆಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ತ್ವರಿತ ಅನುದಾನ ಮಂಜೂರಾಗಲು ಸಹಕರಿಸಿದ್ದಾರೆ.

ಸಜೀಪಮುನ್ನೂರು ಏತನೀರಾವರಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಹೇಶ್ ನಾಯಕ್ ಖಂಡಿಗ ಅವರು, ರೈತರ ಬೇಡಿಕೆಗೆ ಸಮಯೋಚಿತ ಸ್ಪಂದನೆ ನೀಡಿದ ಮಾಜಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.