ನವದೆಹಲಿ: “ಹಿಂದೂ ಧರ್ಮ ಎನ್ನುವುದು ಕೇವಲ ಆಚರಣೆಗಳಿಗೆ ಸೀಮಿತವಾದುದಲ್ಲ, ಅದೊಂದು ಶ್ರೇಷ್ಠ ಜೀವನ ವಿಧಾನ. ಹಿಂದೂವಾಗಿ ಉಳಿಯಲು ದೇವಸ್ಥಾನಕ್ಕೆ ಹೋಗುವುದು ಅಥವಾ ನಿರ್ದಿಷ್ಟ ಧಾರ್ಮಿಕ ವಿಧಿಗಳನ್ನು ಮಾಡುವುದು ಅನಿವಾರ್ಯವಲ್ಲ” ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಶಬರಿಮಲೆ ದೇಗುಲ ಪ್ರವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಈ ಮಹತ್ವದ ಮಾತುಗಳನ್ನು ಆಡಿದೆ. ವಿಚಾರಣೆಯ 15ನೇ ದಿನದಂದು ವಕೀಲ ಡಾ. ಜಿ. ಮೋಹನ್ ಗೋಪಾಲ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “ಒಬ್ಬ ವ್ಯಕ್ತಿ ತನ್ನ ನಂಬಿಕೆಯನ್ನು ಹೊಂದಲು ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ. ಧಾರ್ಮಿಕ ಆಚರಣೆಗಳನ್ನು ಮಾಡದಿದ್ದರೂ ಆತ ಹಿಂದೂವಾಗಿ ಮುಂದುವರಿಯಬಹುದು” ಎಂದರು.
ಇದೇ ವೇಳೆ ಸಿಜೆಐ ಸೂರ್ಯ ಕಾಂತ್ ಅವರು ಧರ್ಮದ ಆಂತರಿಕ ನಂಬಿಕೆಯನ್ನು ಎತ್ತಿ ಹಿಡಿಯುತ್ತಾ, “ಒಬ್ಬ ವ್ಯಕ್ತಿ ತನ್ನ ಗುಡಿಸಲಿನೊಳಗೆ ದೀಪ ಹಚ್ಚಿದರೂ ಸಾಕು, ಅದು ಆತನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ಸಮರ್ಥವಾಗಿದೆ” ಎಂದು ಮಾರ್ಮಿಕವಾಗಿ ನುಡಿದರು. ವೇದಗಳ ಅಧಿಕಾರ ಮತ್ತು ವೈಯಕ್ತಿಕ ನಂಬಿಕೆಗಳ ನಡುವಿನ ಸಮತೋಲನದ ಕುರಿತು ನ್ಯಾಯಪೀಠವು ಗಂಭೀರ ಚರ್ಚೆ ನಡೆಸಿತು.
ಧಾರ್ಮಿಕ ಆಚರಣೆಗಳ ಪ್ರತಿಯೊಂದು ವಿಷಯವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಲು ಆರಂಭಿಸಿದರೆ, ಅದು ಧರ್ಮಗಳ ವಿಘಟನೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿತ್ತು. 2018ರಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನೀಡಿದ್ದ ಅನುಮತಿಯ ನಂತರ, ಧಾರ್ಮಿಕ ಹಕ್ಕುಗಳ ಕುರಿತಾದ ಈ ಸುದೀರ್ಘ ವಿಚಾರಣೆಯು ದೇಶದ ಸಾಂವಿಧಾನಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿದೆ.