ಮುಂಬೈ ಮಾರ್ಚ್ 30: ಪ್ರಸಕ್ತ ಹಣಕಾಸು ವರ್ಷದ (2025-26) ಕೊನೆಯ ದಿನದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ತತ್ತರಿಸಿದೆ. ಜಾಗತಿಕ ಮಾರುಕಟ್ಟೆಯ ಆತಂಕ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರಿ ಕುಸಿತ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ.

ಇಂದು ಮಾರ್ಕೆಟ್ ಓಪನ್ ಆದಾಗಿನಿಂದಲೂ ಕರಡಿ ಕುಣಿತ ಶುರುವಾಗಿತ್ತು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 1,635 ಪಾಯಿಂಟ್ ಪತನಗೊಂಡರೆ, ನಿಫ್ಟಿ 488 ಪಾಯಿಂಟ್ ಕುಸಿತ ಕಂಡಿದೆ. ವಿಶೇಷವಾಗಿ ಬ್ಯಾಂಕಿಂಗ್ ಸೆಕ್ಟರ್ಗೆ ದೊಡ್ಡ ಪೆಟ್ಟು ಬಿದ್ದಿದೆ. ಇದರ ಜೊತೆಗೆ ಭಾರತೀಯ ರೂಪಾಯಿ ಕೂಡ ಇತಿಹಾಸದಲ್ಲೇ ಕಾಣದಷ್ಟು ಕನಿಷ್ಠ ಮಟ್ಟಕ್ಕೆ ಕುಸಿದು ಆತಂಕ ಸೃಷ್ಟಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ 3.66ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 116.70 ಡಾಲರ್ಗೆ ತಲುಪಿದೆ. ಇದು ಕಳೆದ 52 ವಾರಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲೂ ಇಳಿಕೆ ಕಂಡುಬಂದಿದ್ದು, ಹಣಕಾಸು ವರ್ಷದ ಅಂತ್ಯವು ಹೂಡಿಕೆದಾರರಿಗೆ ಕಹಿ ಅನುಭವ ನೀಡಿದೆ.
ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದ್ದು, ಸೋಮವಾರದ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹95.22ಕ್ಕೆ ತಲುಪಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ಈ ಭೀಕರ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಮಾರುಕಟ್ಟೆಯ ಏರಿಳಿತ ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕುಗಳ ರಾತ್ರಿಯಿಡೀ ಉಳಿಸಿಕೊಳ್ಳಬಹುದಾದ ನಿವ್ವಳ ಮೌಲ್ಯದ ಮಿತಿಯನ್ನು $100 ಮಿಲಿಯನ್ಗೆ ಇಳಿಸಿತ್ತು. ಇದರ ಪರಿಣಾಮವಾಗಿ ಬೆಳಿಗ್ಗೆ ರೂಪಾಯಿ ₹93.57ಕ್ಕೆ ಏರಿಕೆ ಕಂಡು ಚೇತರಿಕೆಯ ಹಾದಿಯಲ್ಲಿತ್ತು. ಆದರೆ, ವಹಿವಾಟಿನ ಅಂತ್ಯದ ವೇಳೆಗೆ ಈ ಎಲ್ಲಾ ಲಾಭಗಳನ್ನು ಅಳಿಸಿಹಾಕಿದ ರೂಪಾಯಿ, ಆರಂಭಿಕ ಮಟ್ಟದಿಂದ 160 ಪೈಸೆಗಳಷ್ಟು ಭಾರಿ ಕುಸಿತ ಕಂಡಿತು.
ಶುಕ್ರವಾರವಷ್ಟೇ ₹94.85ಕ್ಕೆ ತಲುಪಿದ್ದ ರೂಪಾಯಿ ಮೌಲ್ಯ, ಇಂದು ಮತ್ತೆ ಕುಸಿದಿರುವುದು ಆಮದುದಾರರ ಮೇಲೆ ಹೊರೆಯಾಗಲಿದೆ. ಕಚ್ಚಾ ತೈಲ ಬೆಲೆ ಏರಿಕೆಯು ಹಣದುಬ್ಬರಕ್ಕೆ ಕಾರಣವಾಗುವ ಆತಂಕ ಮೂಡಿಸಿದ್ದು, ಷೇರು ಮಾರುಕಟ್ಟೆಯ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೇಲಿನ ಒತ್ತಡ ಹೆಚ್ಚುತ್ತಿರುವುದು ಭಾರತೀಯ ಕರೆನ್ಸಿಗೆ ಮಾರಕವಾಗಿ ಪರಿಣಮಿಸಿದೆ.