ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬದಲಾವಣೆಗೆ ಸಂಘಪರಿವಾರ ಒತ್ತಡ ?

ಮಂಗಳೂರು ಮಾರ್ಚ್ 17: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಟಿಕೆಟ್ ನೀಡಲು ಆರ್ ಎಸ್ ಎಸ್ ನಲ್ಲೇ ಭಾರಿ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಬಿಜೆಪಿಯ ಪ್ರಾಬಲ್ಯತೆ ಇರುವ ಕ್ಷೇತ್ರವಾಗಿರುವ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಲಾಟೆ ಜೋರಾಗಿದೆ. ಕಳೆದ 2 ಬಾರಿ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಾರಿಯೂ ಮತ್ತೆ ಸ್ಪರ್ಧೆ ಮಾಡುವ ನಿರೀಕ್ಷೆಯಲ್ಲಿದ್ದು, ಈ ಬಾರಿ ಟಿಕೆಟ್ ನನಗೆ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೇಸ್ ನಿಂದ ರಮಾನಾಥ ರೈ , ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ನಿಂತರೂ ಗೆಲವು ನನ್ನದೇ ಎಂದು ಹೇಳುವ ಮೂಲಕ ಈ ಬಾರಿ ಮತ್ತೆ ಅಭ್ಯರ್ಥಿ ನಾನೇ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಸಂಘಫರಿವಾರ ನಳಿನ್ ಕುಮಾರ್ ಬದಲಾವಣೆಗೆ ಪಟ್ಟು ಹಿಡಿದಿದೆ ಎಂದು ಹೇಳಲಾಗಿದೆ. ಸಂಘ ಪರಿವಾರದ ಪ್ರಮುಖ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಈ ಕುರಿತಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ ದೆಹಲಿ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು ಇಂದು ನಡೆಯುವ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಲಿದೆ. ಈ ಹಿನ್ನಲೆಯಲ್ಲಿ ಸಂಘಪರವಾರದ ನಾಯಕರಾದ ಕಲ್ಲಡ್ಕ ಪ್ರಭಾಕರ್ ಭಟ್ ನಿನ್ನೆಯಿಂದ ಬೆಂಗಳೂರಿನ ಯಡಿಯೂರಪ್ಪ ನಿವಾಸದಲ್ಲಿದ್ದು, ನಳಿನ್ ಕುಮಾರ್ ಬದಲಾವಣೆಗೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ನಳಿನ್ ಪರ- ವಿರೋಧ ವಿಚಾರದಲ್ಲಿ ಸಂಘ ಪರಿವಾರದಲ್ಲಿ ಎರಡು ಬಣಗಳ ಸೃಷ್ಟಿಯಾಗಿದ್ದು, ನಳಿನ್ ಪರವಾಗಿರುವ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇದ್ದು , ವಿರೋಧ ಬಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಇದ್ದಾರೆ.

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಳಿನ್ ಬದಲು ಡಾ. ಸುಧೀರ್ ಹೆಗ್ಡೆ, ಬೃಜೇಶ್ ಚೌಟ ಸೇರಿದಂತೆ ಸತ್ಯಜೀತ್ ಸುರತ್ಕಲ್ ಹೆಸರು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.