ಹೈದರಾಬಾದ್ ಫೆಬ್ರವರಿ 22: ಚಾಲಕನ ನಿಯಂತ್ರಣ ತಪ್ಪಿ 4 ಕೋಟಿ ಮೌಲ್ಯದ ಫೆರಾರಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಭಾನುವಾರ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.

ಜನಪ್ರಿಯ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರ ನಿವಾಸದ ಬಳಿಯ ರಸ್ತೆ ಸಂಖ್ಯೆ 45 ರ ಸಮೀಪ ಈ ಘಟನೆ ನಡೆದಿದೆ. ಸುಮಾರು 3.5-4 ಕೋಟಿ ರೂ. ಮೌಲ್ಯದ ಫೆರಾರಿ ಕಾರು ನಿಯಂತ್ರಣ ತಪ್ಪಿ ವಿಭಜಕದ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆರಾರಿ ಕಾರು ಡಿಕ್ಕಿ ಹೊಡೆದ ಕಾರಿನ ಹಿಂದೆ ಬರುತ್ತಿದ್ದ ಕೆಲವು ಕಾರುಗಳು ಮತ್ತು ಇತರ ವಾಹನಗಳು ಸಹ ಡಿಕ್ಕಿಯಲ್ಲಿ ಹಾನಿಗೊಳಗಾಗಿವೆ.

ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಫೆರಾರಿ ಕಾರನ್ನು ಇ. ವೆಂಕಟ ರಾಜ ರೆಡ್ಡಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಫೆರಾರಿ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಗುರುತು ಇನ್ನೂ ಬಹಿರಂಗಗೊಂಡಿಲ್ಲ, ಆದರೆ ಆತನಲ್ಲಿ ಮದ್ಯ ಸೇವನೆ ಇಲ್ಲ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಮದುವೆಗೆ ಹಾಜರಾಗಲು ತೆರಳುತ್ತಿದ್ದರು.



