ಬೆಂಗಳೂರು, ಏಪ್ರಿಲ್ 04: ಕೇವಲ ಹತ್ತು ರೂಪಾಯಿಗೆ ಸಿಗುವ ಸಾಧಾರಣ ತಿಂಡಿಯೊಂದಕ್ಕೆ ಬರೋಬ್ಬರಿ 150 ರೂಪಾಯಿ ಚಾರ್ಜ್ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಖ್ಯಾತ ಪಬ್ ‘ಟೊಯಿಟ್’ (Toit) ಗೆ ಭೇಟಿ ನೀಡಿದ್ದರು ಎನ್ನಲಾಗಿರುವ ಅರುಣ್ ರಾಜ್ (@arunraj3935) ಎಂಬ ಗ್ರಾಹಕರೊಬ್ಬರು ಮೆನುವಿನಲ್ಲಿ Chilli-Dusted Goldfingers ಎಂಬ ಹೆಸರಿನ ತಿಂಡಿಯನ್ನು ನೋಡಿ ಆರ್ಡರ್ ಮಾಡಿದ್ದರು. ಇದರ ಬೆಲೆ 150 ರೂಪಾಯಿ ಎಂದು ನಮೂದಿಸಲಾಗಿತ್ತು.
ವೇಟರ್ ತಟ್ಟೆಯಲ್ಲಿ ತಂದಿಟ್ಟ ತಿಂಡಿಯನ್ನು ನೋಡಿ ಅರುಣ್ಗೆ ಶಾಕ್ ಕಾದಿತ್ತು. ಯಾಕೆಂದರೆ, ಹೈಫೈ ಹೆಸರಿನಲ್ಲಿ ಬಂದಿದ್ದು ನಾವು ಸಾಮಾನ್ಯವಾಗಿ ಮನೆಯಲ್ಲಿ ಅಥವಾ ರಸ್ತೆ ಬದಿಯಲ್ಲಿ ತಿನ್ನುವ ಬೋಟಿ ಆಗಿತ್ತು. ತಮಗೆ ಬಂದ ತಿಂಡಿಯ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಅರುಣ್ ರಾಜ್, ನಮ್ಮ ವಂಶದಲ್ಲೇ ಇಂತಹ ತಿಂಡಿಗೆ 150 ರೂಪಾಯಿ ಕೊಟ್ಟ ಮೊದಲ ವ್ಯಕ್ತಿ ನಾನೇ ಇರಬೇಕು’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪಬ್ಗಳ ವಿಚಿತ್ರ ಹೆಸರಿಸುವ ಪದ್ಧತಿಯನ್ನು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್ ಮಾಡುತ್ತಾ, ಖಂಡಿತವಾಗಿಯೂ ಇವರು ಹುರಿದ ಶೇಂಗಾ ಬೀಜಕ್ಕೆ (Roasted Peanuts) ‘ಫ್ಲೇಮ್ ಟಾಸ್ಡ್ ಸ್ಪೆಷಲ್ ಮಸಾಲ ಅರ್ಥ್ ನಟ್ಸ್’ (Flame tossed special masala earth nuts) ಎಂದು ಹೆಸರಿಟ್ಟು 500 ರೂಪಾಯಿ ಚಾರ್ಜ್ ಮಾಡ್ತಾರೆ ಅನ್ಸುತ್ತೆ ಎಂದು ಲೇವಡಿ ಮಾಡಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ , ಇದು ಬೆಂಗಳೂರಿನ ಪಬ್ ಸಂಸ್ಕೃತಿ! ಹೆಸರಿನಲ್ಲಿ ಚಿನ್ನ ಇದ್ದ ಮೇಲೆ ಬೆಲೆ ಹೆಚ್ಚಿರಲೇಬೇಕಲ್ಲವೇ? ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆಯಾಗಿ, ಸಾಮಾನ್ಯ ತಿಂಡಿಗಳಿಗೆ ಆಕರ್ಷಕ ಇಂಗ್ಲಿಷ್ ಹೆಸರುಗಳನ್ನು ಇಟ್ಟು ಗ್ರಾಹಕರಿಂದ ಭಾರಿ ಹಣ ವಸೂಲಿ ಮಾಡುವ ಪಬ್ಗಳ ತಂತ್ರದ ಬಗ್ಗೆ ಈ ಪೋಸ್ಟ್ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.