ಬಾಲಿವುಡ್ನ ಖ್ಯಾತ ಆಕ್ಷನ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಮೇಲೆ ನಡೆದಿದ್ದ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಮತ್ತು ಮುಂಬೈ ಕ್ರೈಂ ಬ್ರಾಂಚ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಗುರುವಾರ ಬಂಧಿಸಲಾಗಿದೆ.

ಆಗ್ರಾದ ಅಶೋಕ್ ನಗರ ನಿವಾಸಿಯಾದ ಪ್ರದೀಪ್ ಕುಮಾರ್ ಬಂಧಿತ ಆರೋಪಿ. ಕಳೆದ ಫೆಬ್ರವರಿ 1ರಂದು ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಹಂತಕರು ನಡೆಸಿದ ಫೈರಿಂಗ್ನಿಂದಾಗಿ ಶೆಟ್ಟಿ ಅವರ ಮನೆಯ ಬಾಲ್ಕನಿಯ ಗಾಜಿನ ಗೋಡೆಗಳು ಪುಡಿಯಾಗಿದ್ದವು. ಚಿತ್ರರಂಗದಲ್ಲಿ ಭೀತಿಯ ವಾತಾವರಣ ನಿರ್ಮಿಸಿ, ಸೆಲೆಬ್ರಿಟಿಗಳಿಂದ ದೊಡ್ಡ ಮೊತ್ತದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಕುಖ್ಯಾತ ಶುಭಂ ಲೋಂಕರ್ ಗ್ಯಾಂಗ್ ಈ ಸಂಚು ರೂಪಿಸಿತ್ತು ಎಂದು ಪೊಲೀಸರು ಪ್ರಾಥಮಿಕ ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾರೆ.
ಬಂಧಿತ ಆರೋಪಿ ಪ್ರದೀಪ್ ಕುಮಾರ್, ತಾನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಗ್ಯಾಂಗ್ನ ಸಂಪರ್ಕಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಭೂಗತ ಲೋಕದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸುವ ಹಂಬಲ ಹೊಂದಿದ್ದ ಈತ, ಸನ್ನಿ, ದೀಪು ಮತ್ತು ಸೋನು ಎಂಬ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಪ್ರದೀಪ್ ಶರ್ಮಾ ಅಲಿಯಾಸ್ ಗೋಲು, ದೀಪಕ್ ಮತ್ತು ವಿಷ್ಣು ಕುಶ್ವಾಹ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಮೇಲೆ ಭಾರತೀಯ ನ್ಯಾಯ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯ ನಂತರ ರೋಹಿತ್ ಶೆಟ್ಟಿ ಅವರಿಗೆ ಮುಂಬೈ ಪೊಲೀಸರು ವೈ-ಪ್ಲಸ್ ಕೆಟಗರಿಯ ಭದ್ರತೆ ನೀಡಿದ್ದರು.