ಬೆಳ್ತಂಗಡಿ, ಮಾರ್ಚ್ 15: ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ರೂ.10 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಸಂಪರ್ಕ ರಸ್ತೆಯನ್ನು ಭಾನುವಾರ ಉದ್ಘಾಟಿಸಿದರು.

ಕುಕ್ಕೆಡಿ ಗ್ರಾಮದ ಕುಂಡದಬೆಟ್ಟು ಪ್ರದೇಶದಲ್ಲಿರುವ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಅನುದಾನದಿಂದ ರೂ.10 ಲಕ್ಷ ಬಿಡುಗಡೆ ಮಾಡಿದ್ದರು. ಈ ಅನುದಾನದಡಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೆಬಾಸ್ಟಿಯನ್, ಸಂತ ಜಾನ್ ಪೌಲ್ ಚರ್ಚ್ನ ಫಾದರ್ ಸನ್ನಿ ಅಲಾಪಟ್, ಟ್ರಸ್ಟಿಗಳಾದ ಅಲ್ವಿನ್, ಜಾರ್ಜ್, ದಿನು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಗ್ರಾಮಸ್ಥರು ಮಾತನಾಡಿ, ರಸ್ತೆ ಅಭಿವೃದ್ಧಿಯಿಂದ ಸಂಚಾರಕ್ಕೆ ಸುಗಮತೆ ದೊರಕಿದ್ದು ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.