ಪುತ್ತೂರು ಜೂನ್ 17: ಪುತ್ತೂರು ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಾರಾಡಿ ರೈಲ್ವೇ ಸೇತುವೆಯ ಕೆಳಬದಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭಿಸುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಶೇಧಿಸಲಾಗಿದೆ. ಈ ಭಾಗದಲ್ಲಿ ರಸ್ತೆಯು ಕಿರಿದಾಗಿದ್ದು, ದ್ವಿಮುಖ ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಈ ಭಾಗದಲ್ಲಿ ಕಾಮಗಾರಿ ನಡೆಸಲು ಜೂನ್ 18 ರಿಂದ ಜುಲೈ 18 ರವರೆಗೆ ಒಂದು ತಿಂಗಳ ಕಾಲ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಸಂಬಂಧ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದರ್ಶನ್ .ಹೆಚ್. ವಿ ಸರಕಾರಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ಮತ್ತು ಬರುವ ವಾಹನಗಳಿಗೆ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮಕೈಗೊಂಡು ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಪವಿಭಾಗ, ಪುತ್ತೂರು ಇವರು ಕೋರಿರುವ ಹಿನ್ನೆಲೆಯಲ್ಲಿ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ವಾಹನ ಸಂಚಾರದ ಸುರಕ್ಷತೆಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಒಂದು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಶೇಧಿಸಿರುವ ಹಿನ್ನಲೆಯಲ್ಲಿ ವಾಹನಗಳಿಗೆ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಈ ವ್ಯವಸ್ಥೆ ಜೂನ್ 18 ರಿಂದ ಜಾರಿಗೆ ಬರಲಿದೆ. ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುವ ವಾಹನಗಳು ಪುತ್ತೂರು ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಮೂಲಕ ಕೋಟೆಚಾ ಹಾಲ್ ಮುಖಾಂತರ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುವುದು.

ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳು ಕೋಟಿಚಾ ಹಾಲ್ ಮೂಲಕ ಎ.ಪಿ.ಎಂ.ಸಿ. ರಸ್ತೆಯಾಗಿ ಪುತ್ತೂರು ಮುಖ್ಯ ರಸ್ತೆಯನ್ನು ಸಂಪರ್ಕಿಸುವುದು. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಡೀಲ್ ಜಂಕ್ಷನ್ ಮೂಲಕ ನಗರ ಮಾರ್ಗದಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ