ಉಡುಪಿ ಮಾರ್ಚ್ 04: ಪ್ರೇಮ ಪ್ರಕರಣವೊಂದರ ರಾಜಿ ಪಂಚಾಯ್ತಿಯ ವೇಳೆ ಯುವಕನೊಬ್ಬ ಹಿಂದೂ ಸಂಘಟನೆಯ ಮುಖಂಡನಿಗೆ ಚಾಕು ಇರಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರಿಂದ ಮೀನುಗಾರ ಮುಖಂಡನಿಗೆ ಚಾಕು ಇರಿಯಲಾಗಿದೆ. ಸದ್ಯ ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಇರಿದ ಆರೋಪಿಗಳನ್ನು ಸ್ಥಳೀಯರು ಪತ್ತೆಮಾಡಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಘಟನೆ ವೈಯಕ್ತಿಕ ಕಾರಣಗಳಿಂದ ನಡೆದಿರುವುದಾಗಿದೆ. ಘಟನೆಗೆ ಯಾವುದೇ ಕೋಮು ಹಿನ್ನೆಲೆ ಇಲ್ಲ. ಆದ್ದರಿಂದ ಯಾರೂ ಸಹ ವದಂತಿಗಳನ್ನು ಹರಡಬಾರದು. ಗಾಯಗೊಂಡ ಮಂಜು ಕೊಳ ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.



