ಪುತ್ತೂರು ನವೆಂಬರ್ 19: ಪುತ್ತೂರು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದ್ದ ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಅರುಣ್ ಕುಮಾರ್ ಪುತ್ತಿಲ ಗೈರು ಹಾಜರಾಗಿದ್ದು, ಪುತ್ತೂರು ಬಿಜೆಪಿಯಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

ಮಾಜಿ ಪ್ರಧಾನಿ ಭಾರತರತ್ನಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಆಯೋಜಿಸಲಾಗಿದ್ದ ಅಟಲ್ ವಿರಾಸತ್ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಬಿಜೆಪಿ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಬಹುತೇಕ ಬಿಜೆಪಿ ಶಕ್ತಿ ಪ್ರದರ್ಶನದ ವೇದಿಕೆಯಾಗಿದ್ದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲೇ ಪುತ್ತೂರಿನ ಬಿಜೆಪಿಯ ಭಿನ್ನಮತ ಬಟಾಬಯಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ರೆಬೆಲ್ ನಿಂತು ಬಿಜೆಪಿ ಸೋಲಿಗೆ ಪ್ರಮುಖ ಕಾರಣರಾಗಿದ್ದ ಅರುಣ್ ಕುಮಾರ್ ಪುತ್ತಿಲ ಬಳಿಕ ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಯಾವುದೇ ಹುದ್ದೆಗೆ ಆಕಾಂಕ್ಷಿಯಲ್ಲ ಎಂದು ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ನಡುವೆ ಬಿಜೆಪಿ ಮತ್ತು ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇದೀಗ ಇಂದು ಪುತ್ತೂರಿನಲ್ಲಿ ನಡೆದ ಬಿಜೆಪಿ ಶಕ್ತಿ ಪ್ರದರ್ಶನದ ವೇದಿಕೆಯಲ್ಲಿ ಅರುಣ್ ಪುತ್ತಿಲ ಗೈರು ಆಗುವ ಮೂಲಕ ಎಲ್ಲವೂ ಸರಿಯಿಲ್ಲ ಎಂದು ಜನರಿಗೆ ತಿಳಿದು ಬಂದಿದೆ.

ಇನ್ನು ಪುತ್ತೂರು ಬಿಜೆಪಿ ಸಮಾವೇಶದಲ್ಲಿ ಅರುಣ್ ಪುತ್ತಿಲ ಗೈರು ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಾವುದೇ ಉತ್ತರ ನೀಡಿಲ್ಲ. ಅರುಣ್ ಪುತ್ತಿಲ ಅನುಪಸ್ಥಿತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಇದೀಗ ಪುತ್ತೂರಿಗೆ ರಾಜ್ಯಾಧ್ಯಕ್ಷ ಭೇಟಿ ಮಧ್ಯೆಯೇ ಮತ್ತೆ ಅಲರ್ಟ್ ಆದ ಪುತ್ತಿಲ ಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ 2028 ರ ಚುನಾವಣೆಯಲ್ಲೂ ಅರುಣ್ ಕುಮಾರ್ ಪುತ್ತಿಲ ಅಭ್ಯರ್ಥಿ ಎನ್ನುವ ಪೋಸ್ಟರ್ ವೈರಲ್ ಮಾಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯ ಭದ್ರಕೋಟೆ ಪುತ್ತೂರಿನಲ್ಲೇ ಬಿಜೆಪಿ ಓಡೆದ ಮನೆಯಾಗಿದೆ ಎಂದು ಹೇಳಲಾಗಿದ್ದು, ಅರುಣ್ ಕುಮಾರ್ ಪುತ್ತಿಲ ಇಂದಿನ ಸಮಾವೇಶಕ್ಕೆ ಗೈರಾಗಿರುವುದು ಯಾವ ಕಾರಣಕ್ಕೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.



