ಬೆಂಗಳೂರು, ಜೂನ್ 13: ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರ ಅಡುಗೆಮನೆಗೆ ಈಗ ಮತ್ತೊಂದು ಬೆಲೆ ಏರಿಕೆಯ ಬರೆ ಬಿದ್ದಿದೆ. ಪೆಟ್ರೋಲ್, ಡೀಸೆಲ್ ಮತ್ತು ಇಂಧನ ದರ ಏರಿಕೆಯ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ವಿವಿಧ ತಳಿಯ ಅಕ್ಕಿ ದರ ದಿಢೀರನೆ ಕೆಜಿಗೆ ₹10 ರಿಂದ ₹20 ರವರೆಗೆ ಜಿಗಿದಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದ್ದು, ಬಡ ಮತ್ತು ಮಧ್ಯಮ ವರ್ಗದವರ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗಿದೆ.
ಮಾರುಕಟ್ಟೆಯ ವರ್ತಕರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯ ಪ್ರಮಾಣದಲ್ಲಿ ಭಾರಿ ಕೊರತೆ ಉಂಟಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರವು ಅಕ್ಕಿ ರಫ್ತಿಗೆ (Export) ಮುಕ್ತ ಅವಕಾಶ ನೀಡಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಅಕ್ಕಿಯ ಲಭ್ಯತೆ ಗಣನೀಯವಾಗಿ ಕ್ಷೀಣಿಸಿದೆ. ಇದು ನೇರವಾಗಿ ಮುಕ್ತ ಮಾರುಕಟ್ಟೆಯ ದರಗಳ ಮೇಲೆ ಪ್ರಭಾವ ಬೀರಿದೆ. ಸದ್ಯ ಅಕ್ಕಿ ದರ ಹೆಚ್ಚಾಗಿರುವುದರಿಂದ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ವ್ಯಾಪಾರಿಗಳ ಮಾರಾಟದಲ್ಲೂ ಭಾರಿ ಕುಸಿತ ಕಂಡುಬಂದಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ಯ ಅಕ್ಕಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದೇ ಈ ದಿಢೀರ್ ದರ ಏರಿಕೆಗೆ ಮುಖ್ಯ ಕಾರಣ ಎಂದು ವರ್ತಕರು ತಿಳಿಸಿದ್ದಾರೆ. ಕೇವಲ ಬಿಡಿ ಅಕ್ಕಿ ಮಾತ್ರವಲ್ಲದೆ, ನಿತ್ಯ ಸಾರ್ವಜನಿಕರು ಖರೀದಿಸುವ 25 ಮತ್ತು 26 ಕೆಜಿಯ ಅಕ್ಕಿ ಚೀಲಗಳ (ಮೂಟೆ) ಬೆಲೆಯಲ್ಲಿ ಕನಿಷ್ಠ ₹150 ರಿಂದ ₹200 ರವರೆಗೆ ಹೆಚ್ಚಳವಾಗಿದೆ. ಮಧ್ಯಪ್ರಾಚ್ಯದ ಜಾಗತಿಕ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಸಾರಿಗೆ ವೆಚ್ಚದ ಏರಿಕೆಯು ಪರೋಕ್ಷವಾಗಿ ಆಹಾರ ಧಾನ್ಯಗಳ ಮಾರುಕಟ್ಟೆಯ ಮೇಲೂ ಭಾರಿ ಪರಿಣಾಮ ಬೀರಿದೆ ಎನ್ನಲಾಗಿದೆ.
ರೈತರು ಬೆಳೆದಿರುವ ಹೊಸ ಭತ್ತದ ಬೆಳೆ ಕಟಾವಾಗಿ, ಹೊಸ ಅಕ್ಕಿ ಮಾರುಕಟ್ಟೆಗೆ ಬರಲು ಇನ್ನು ಕನಿಷ್ಠ ನವೆಂಬರ್ ತಿಂಗಳವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಕೊರತೆ ಹೀಗೆಯೇ ಮುಂದುವರಿಯಲಿದ್ದು, ಸದ್ಯಕ್ಕಂತೂ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೆಲವು ಪ್ರೀಮಿಯಂ ತಳಿಯ ಅಕ್ಕಿ ದರಗಳು ಕೆಜಿಗೆ 100 ರೂಪಾಯಿಯ ಗಡಿ ದಾಟಿದರೂ ಆಶ್ಚರ್ಯವಿಲ್ಲ ಎಂದು ಅಕ್ಕಿ ವ್ಯಾಪಾರಿ ತಿಳಿಸಿದ್ದಾರೆ.
ವಿವಿಧ ತಳಿಯ ಅಕ್ಕಿಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ (ಪ್ರತಿ ಕೆ.ಜಿಗೆ)
| ಸ್ಟೀಮ್ ರೈಸ್ | 47 | 56 |
| ರಾ ರೈಸ್ | 50 | 62 |
| ಕೋಲಂ ರೈಸ್ | 68 | 80 |
| ಕೋಲಂ ಸ್ಟೀಮ್ | 55 | 65 |
ಒಟ್ಟಾರೆಯಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಸಾರ್ವಜನಿಕರ ಜೀವನ ನಿರ್ವಹಣೆಯನ್ನು ಅತ್ಯಂತ ದುಸ್ತರವಾಗಿಸಿದೆ. ತರಕಾರಿ, ಇಂಧನ, ಗ್ಯಾಸ್ ಸಿಲಿಂಡರ್ ದರ ಏರಿಕೆಯ ಬೆನ್ನಲ್ಲೇ ಈಗ ಅನ್ನದ ಬಟ್ಟಲಿಗೂ ಬೆಲೆ ಏರಿಕೆಯ ಬಿಸಿ ತಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.