KARNATAKA
‘ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ,ಶೀಘ್ರವೇ ಚಾರ್ಜ್ಶೀಟ್ ಸಲ್ಲಿಕೆ’ ಪೊಲೀಸ್ ಕಮಿಷನರ್ ಬಿ.ದಯಾನಂದ್
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಕೇಸ್ಗೆ ಸಂಬಂಧಿಸಿ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರವೇ ಚಾರ್ಜ್ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರು ಮಾಹಿತಿ ನೀಡಿದ್ದಾರೆ.
ಈ ಕೊಲೆ ಪ್ರಕರಣ ಸಂಬಂಧ ಬಹುತೇಕ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈಗೆ ಸೇರಿದ್ದು, ಅನೇಕ ಮೌಖಿಕ, ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಶೇಕಡ 70 ರಷ್ಟು ವರದಿಗಳು ತಮ್ಮ ಕೈ ಸೇರಿವೆ. ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ ಗೆ ಕಳಿಸಲಾಗಿದ್ದು ಅಲ್ಲಿಂದ ವರದಿಗಳು ಕೆಲ ದಿನಗಳಲ್ಲಿ ತಮ್ಮನ್ನು ತಲುಪಲಿವೆ. ಎಲ್ಲ ವರದಿಗಳು ಪ್ರಾಪ್ತವಾದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು, ಅದಾದ ನಂತರ ಪ್ರಕರಣದ ಅಂತಿಮ ವರದಿ ಅಥವಾ ಚಾರ್ಜ್ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಕೊಲೆ ಆರೋಪದಲ್ಲಿ ಸದ್ಯ ನಟ ದರ್ಶನ್ & ಗ್ಯಾಂಗ್ನ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ದರ್ಶನ್ ಆಪ್ತೆ ಪವಿತ್ರಾಗೌಡ ಪ್ರಕರಣದಲ್ಲಿ A1 ಆರೋಪಿಯಾಗಿದ್ದು, ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಸಂಚು ರೂಪಿಸಿ ಅಪಹರಣ ಮಾಡಿ, ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತಂದು ಹಲ್ಲೆ ನಡೆಸಿ ಕೊಲೆಗೈಯಲಾಗಿತ್ತು.
You must be logged in to post a comment Login