ಕೋಟ ಎಪ್ರಿಲ್ 05: ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದ ನಿವಾಸಿ, ವೃತ್ತಿಪರ ಛಾಯಾಗ್ರಾಹಕ ಗಣೇಶ್ ಮೆಂಡನ್ (38) ಅವರು ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಣೇಶ್ ಮೆಂಡನ್ ಅವರು ಎಪ್ರಿಲ್ 4ರಂದು ಶನಿವಾರ ರಾತ್ರಿ ಕೊಮೆ ಬೀಚ್ಗೆ ಫೋಟೋ ಶೂಟ್ಗಾಗಿ ತೆರಳಿದ್ದರು. ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆದರೆ, ಎಪ್ರಿಲ್ 5ರಂದು ಬೆಳಗಿನ ಜಾವ 3 ಗಂಟೆಗೆ ಪತ್ನಿ ಅಕ್ಷತಾ ಎದ್ದು ನೋಡಿದಾಗ, ಗಣೇಶ್ ಮನೆಯ ಹಾಲಿನ ಫ್ಯಾನ್ ಹುಕ್ಕಿಗೆ ಸೀರೆ ಮತ್ತು ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರ ಪತ್ನಿ ಅಕ್ಷತಾ ಅವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 15/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.