ಒಡಿಶಾ,ಫೆಬ್ರವರಿ 15: ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಒಡಿಶಾದ ಖ್ಯಾತ ಗಾಯಕಿ ಗೀತಾ ಪಟ್ನಾಯಕ್ ನಿಧನ (73) ಫೆ.15 ರಂದು ಸಂಜೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಅವರ ಸಂಬಂಧಿ ಪ್ರದೋಷ್ ಪಟ್ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಕಳೆದ ಕೆಲವು ದಿನಗಳ ಹಿಂದೆ ಗೀತಾ ಪಟ್ನಾಯಕ್ ಹಠಾತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಿದಾಗ ಬ್ರೈನ್ ಸ್ಟ್ರೋಕ್ ಇರುವುದು ದೃಢಪಟ್ಟಿದೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಟಕ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ದಶಕಗಳ ಕಾಲ ಒಡಿಯಾ ಚಿತ್ರರಂಗ ಮತ್ತು ಸುಗಮ ಸಂಗೀತದಲ್ಲಿ ಸಕ್ರಿಯರಾಗಿದ್ದ ಗೀತಾ ಪಟ್ನಾಯಕ್ ಅವರಿಗೆ ವಿಶೇಷವಾಗಿ ‘ಜಜಾಬರ್’ ಚಿತ್ರದ ‘ಫುರ್ ಕಿನಾ ಉಡಿಗಾಲ ಬಾನಿ’ ಎಂಬ ಹಾಡು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಮಾತ್ರವಲ್ಲ ದಂತಕಥೆ ಅಕ್ಷಯ ಮೊಹಾಂತಿ ಅವರೊಂದಿಗೆ ಹಲವಾರು ಜನಪ್ರಿಯ ಗೀತೆಗಳನ್ನು ಹಾಡಿದ್ದರು.
ಗೀತಾ ಪಟ್ನಾಯಕ್ ನಿಧನಕ್ಕೆ ಒಡಿಶಾದ ಗಣ್ಯರು ಹಾಗೂ ಸಂಗೀತ ಪ್ರೇಮಿಗಳು,ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.