ಉಡುಪಿ ನವೆಂಬರ್ 21 : ವಿದೇಶದಿಂದ ತರಿಸಿಕೊಂಡಿದ್ದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಅಕ್ರಮವಾಗಿ ನೊಂದಣಿ ಮಾಡಿದ ಆರೋಪದ ಮೇಲೆ ಉಡುಪಿ ಹಾಗೂ ಮಂಗಳೂರು ಆರ್.ಟಿ.ಓ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಅಕ್ರಮವಾಗಿ ನೋಂದಣಿ ಮಾಡುವ ಮೂಲಕ ಅಂದಾಜು ರಾಜ್ಯ ಸರಕಾರಕ್ಕೆ ಕೋಟಿ ರೂಪಾಯಿ ರಸ್ತೆ ತೆರಿಗೆ ಸರಕಾರಕ್ಕೆ ನಷ್ಟ ಮಾಡಿದ್ದಾರೆ ಎಂಬ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸದ್ರಿ ವರದಿಯ ಆಧಾರದ ಮೇಲೆ ಉಡುಪಿ ಲೋಕಾಯುಕ್ತ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಉಡುಪಿ ಆರ್.ಟಿ.ಓ ಕಚೇರಿಯಲ್ಲಿ ಸುಮಾರು 2 ಕೋಟಿ ರೂ. ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಕಾರನ್ನು ಅದೇ ಕಂಪನಿಯ ಕಡಿಮೆ ಬೆಲೆಯ ಕಾರಿನ ಮಾಡೆಲ್ ಅನ್ನು ಎಡಿಟ್ ಮಾಡಿ 2017 ನೇ ಮಾಡೆಲ್‌ನ ಸದ್ರಿ ಕಾರನ್ನು ಫೆಬ್ರವರಿ 2025 ರಂದು ನೋಂದಣಿ ಮಾಡುವ ಮೂಲಕ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಹಣ ನಷ್ಟವನ್ನುಂಟು ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಈ ಹಿನ್ನಲೆ ಲೋಕಾಯುಕ್ತ ಪೊಲೀಸರು ಆರ್.ಟಿ.ಓ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆದುಕೊಂಡು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಉಡುಪಿ ಹಾಗೂ ಮಂಗಳೂರು ಆರ್.ಟಿ.ಓ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಯವರ ಮೇಲಿನ ಆರೋಪಗಳು ದೃಢಪಟ್ಟಿದ್ದು, ಇದೀಗ ಮೇಲಾಧಿಕಾರಿಗಳ ಅನುಮತಿ ಪಡೆದು ನವೆಂಬರ್ 17 ರಂದು ಪ್ರಕರಣ ದಾಖಲಿಸಿ, ಅಧಿಕಾರ ದುರ್ಬಳಕೆ ಹಾಗೂ ದಾಖಲಾತಿಗಳ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಉಡುಪಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Share Information