ಬೆಂಗಳೂರು, ಆಗಸ್ಟ್ 19: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮಕ್ಕೆದೊಂದಿಗೆ ಮಾತನಾಡಿದ ಅವರು, ಸಂಸದ ಸಸಿಕಾಂತ್ ಸೆಂಥಿಲ್ ಮೂಲಕ ಈ ಕೇಸ್ ಮಾಡಿಸುತ್ತಿದ್ದಾರೆ ಎಂದರು. ಮುಸುಕುಧಾರಿಯೂ ಕೂಡ ತಮಿಳುನಾಡು ಮೂಲದವನು. ಮುಸುಕುಧಾರಿ ಇಷ್ಟು ವರ್ಷ ತಮಿಳುನಾಡಿನಲ್ಲಿಯೇ ವಾಸಿಸುತ್ತಿದ್ದನು. ತಮಿಳುನಾಡಿನ ಆ ವ್ಯಕ್ತಿಗೂ, ಸಸಿಕಾಂತ್ ಸೆಂಥಿಲ್ಗೂ ನಂಟಿದೆ. ಧರ್ಮಸ್ಥಳ ಕೇಸ್ ಸಂಬಂಧ ಎಸ್ಐಟಿಯಿಂದ ಸತ್ಯ ಹೊರಬರಲ್ಲ. ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಸಿಬಿಐ ಹಾಗೂ ಎನ್ಐಎಯಿಂದ ತನಿಖೆ ಆಗಬೇಕು. ನ್ಯಾಯಕ್ಕಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಅಡಿ ದೂರು ಕೊಡುತ್ತೇನೆ ಎಂದು ಹೇಳಿದರು.
ಧರ್ಮಸ್ಥಳದ ಬಗ್ಗೆ ದುಷ್ಟ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರವಾಗುತ್ತಿದೆ. ಎಡಪಂಥೀಯ ಮನೋಭಾವನೆವುಳ್ಳ ದುಷ್ಟ ಶಕ್ತಿಗಳೆಲ್ಲ ಸೇರಿಕೊಂಡಿವೆ. ಈ ಹುನ್ನಾರ ಇಲ್ಲಿಗೆ ಕೊನೆಗಾಣಿಸಬೇಕು. ಮುಸುಕುಧಾರಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿಟ್ಟಿದ್ದ ಎಂಬುವುದು ಬೋಗಸ್ ಆಯ್ತು. ಹಿಂದೂ ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ. ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ಗೆ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದರು.