Connect with us

LATEST NEWS

ಶಾಸಕ ರಾಜೇಶ್ ನಾಯ್ಕ್​ರಿಂದ ರೆಡ್​ ಬಾಕ್ಸೈಟ್​ ಅಕ್ರಮ ಸಾಗಾಟ: ರಮಾನಾಥ ರೈ ಆರೋಪ

ಮಂಗಳೂರು, ನವೆಂಬರ್ 14 :ಮುರಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದು, ಅದೇ ಪರವಾನಗಿ ಉಪಯೋಗಿಸಿ ರೆಡ್ ಬಾಕ್ಸೈಟ್ ಸಾಗಾಟ ಮಾಡುವ ಮೂಲಕ ಬಿಜೆಪಿ‌ ಶಾಸಕ ರಾಜೇಶ್ ನಾಯ್ಕ್ ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ‌ ಸಚಿವ ರಮಾನಾಥ ರೈ ಆರೋಪ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜೇಶ್ ನಾಯ್ಕ್ ಅವರ ಪತ್ನಿಯ ಹೆಸರಿನಲ್ಲಿ ಈ ಪರವಾನಿಗೆ ಇದ್ದು, ನಾನು ಈ ಹಿಂದೆಯೇ ಈ ಬಗ್ಗೆ ಆರೋಪ ಮಾಡಿದ್ದೆ. ನಾನು ಮಾಡಿರುವ ಆರೋಪ ಸಾಬೀತಾದಲ್ಲಿ ತಾವು ರಾಜೀನಾಮೆ ಕೊಡುವುದಾಗಿ ರಾಜೇಶ್ ನಾಯ್ಕ್ ಹೇಳಿದ್ದರು. ನಾನು ಆ ಸವಾಲನ್ನು ಸ್ವೀಕರಿಸಿ, ಈಗ ಋಜುವಾತುಪಡಿಸಿದ್ದೇನೆ ಎಂದು ಹೇಳಿದರು.

ಮುಡಿಪುವಿನಲ್ಲಿ ಕೇವಲ ಭೂಮಿ ಸಮತಟ್ಟು ಮಾಡಲಷ್ಟೇ ಅನುಮತಿ ಇದೆ. ಆದರೆ, ಇವರು ತಮ್ಮ ಪರವಾನಿಗೆಯನ್ನು ಮತ್ತೊಬ್ಬರಿಗೆ ನೀಡಿ ಈ ಮೂಲಕ ಮುಡಿಪುವಿನಿಂದ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಪ್ರಖ್ಯಾತ ಸಿಮೆಂಟ್ ಕಂಪನಿಗಳಿಗೆ ರೆಡ್ ಬಾಕ್ಸೈಟ್ ಸಾಗಾಟ ಮಾಡುತ್ತಿದ್ದಾರೆ. ಕೈರಂಗಳದ ಪಿಡಿಒ ಹೆಸರಿನಲ್ಲಿ ಅಕ್ರಮವಾಗಿ ಅನುಮತಿ ಪಡೆಯಲಾಗಿದೆ. ಈ ಪಿಡಿಒ ಹೆಸರಿನಲ್ಲಿ ಅಕ್ರಮವಾಗಿ 14 ಸಾವಿರ ಟನ್ ರೆಡ್ ಬಾಕ್ಸೈಟ್ ಸಾಗಿಸಲಾಗಿದೆ. ಈ ಗಣಿಗಾರಿಕೆಯ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ‌. ಅವರು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದರು.

ಬಿಜೆಪಿಯವರು ವ್ಯಾಪಾರದಲ್ಲಿ ದೊಡ್ಡ ಜಾತ್ಯಾತೀತರು. ಅವರಿಗೆ ಯಾವ ಜಾತಿಯವರಾದರೂ ಆಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅವರು ಹಿಂದೂ ಧರ್ಮ ರಕ್ಷಕರು. ಮರಳುಗಾರಿಕೆ, ಗಣಿಗಾರಿಕೆಯಲ್ಲಿ ಅವರು ಜಾತ್ಯಾತೀತರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಾನು ರೈತ ಅನ್ನುವ ರೀತಿಯಲ್ಲಿ ಪೋಸ್ ಕೊಡುತ್ತಾರೆ. ಆದರೆ, ಅವರು ರೈತನಾ? ಅಥವಾ ವ್ಯಾಪಾರಿಯಾ ಎಂದು ಸಾಬೀತಾಗಲಿ ಎಂದು ರಮಾನಾಥ ರೈ ಪ್ರಶ್ನೆ ಹಾಕಿದರು.

Facebook Comments

comments