ಬೆಂಗಳೂರು,,ಮಾರ್ಚ್ 26: ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026) ಅತ್ಯಂತ ಜನಪ್ರಿಯ ಫ್ರಾಂಚೈಸಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡದ ಮಾಲೀಕತ್ವ ಬದಲಾದ ಬೆನ್ನಲ್ಲೇ ಹಬ್ಬಿದ್ದ “ಹೆಸರು ಬದಲಾವಣೆ” ವದಂತಿಗಳಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಆದಿತ್ಯ ಬಿರ್ಲಾ ಸಮೂಹದ ಪ್ರಮುಖ ವ್ಯಕ್ತಿ ಹಾಗೂ ಖ್ಯಾತ ಉದ್ಯಮಿ ಅನನ್ಯಾ ಬಿರ್ಲಾ ಅವರು ಈ ಕುರಿತು ಸ್ಪಷ್ಟನೆ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (Diageo) ನಿಂದ ಆರ್ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಸಮೂಹದ ನೇತೃತ್ವದ ಒಕ್ಕೂಟವು ಸುಮಾರು 1.78 ಬಿಲಿಯನ್ ಡಾಲರ್ (ಅಂದಾಜು ₹16,700 ಕೋಟಿ) ಮೊತ್ತಕ್ಕೆ ಖರೀದಿಸಿತ್ತು. ಮಾಲೀಕತ್ವ ಬದಲಾದ ಕೂಡಲೇ, ಹೊಸ ಮಾಲೀಕರು ತಂಡದ ಹೆಸರನ್ನು ಬದಲಾಯಿಸಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ನಡೆಯುತ್ತಿತ್ತು.
ಅನನ್ಯಾ ಬಿರ್ಲಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ: ಆರ್ಸಿಬಿ ತಂಡದ ಹೆಸರು ಬದಲಾಗುವುದಿಲ್ಲ ಎಂಬ ಪೋಸ್ಟ್ ಅನ್ನು ಅನನ್ಯಾ ಅವರು ರೀ-ಪೋಸ್ಟ್ ಮಾಡುವ ಮೂಲಕ, ತಂಡದ ಐಡೆಂಟಿಟಿಯನ್ನು ಹಾಗೆ ಉಳಿಸಿಕೊಳ್ಳಲಾಗುವುದು ಎಂದು ಖಚಿತಪಡಿಸಿದ್ದಾರೆ.”ಈ ಬದಲಾವಣೆಯು ನಮ್ಮ ಬಗ್ಗೆಯಲ್ಲ, ಇದು ನಿಮ್ಮ ಬಗ್ಗೆ (ಅಭಿಮಾನಿಗಳ ಬಗ್ಗೆ). ನಾವು ಇದನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.
ಆರ್ಸಿಬಿ ಎಂಬುದು ಕೇವಲ ಒಂದು ತಂಡವಲ್ಲ, ಅದೊಂದು ಬ್ರ್ಯಾಂಡ್ ಮತ್ತು ಭಾವನೆ. ಹೆಸರು ಬದಲಾದರೆ ತಂಡದ ಇತಿಹಾಸ ಮತ್ತು ಫ್ಯಾನ್ ಬೇಸ್ಗೆ ಧಕ್ಕೆಯಾಗಬಹುದು ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಆದರೆ, ಬಿರ್ಲಾ ಕುಟುಂಬವು ತಂಡದ ಮೂಲ ಹೆಸರಾದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಅನ್ನೇ ಉಳಿಸಿಕೊಳ್ಳಲು ನಿರ್ಧರಿಸಿರುವುದು ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ.