DAKSHINA KANNADA
ಪುತ್ತೂರು – ಪಾರ್ಟಿಗೆ ಬಂದ ಯುವತಿಯ ಮೇಲೆ ಅತ್ಯಾಚಾರ
ಪುತ್ತೂರು ಫೆಬ್ರವರಿ 8: ಸ್ನೇಹಿತನ ಬೀಳ್ಕೊಡುಗೆ ಪಾರ್ಟಿಗೆ ಆಗಮಿಸಿದ್ದ ಯುವತಿಯೊಬ್ಬಳ ಮೇಲೆ ಪಾರ್ಟಿಗೆ ಬಂದಿದ್ದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪುತ್ತೂರಿನ ಗೆಸ್ಟ್ ಹೌಸ್ ಒಂದರಲ್ಲಿ ನಡೆದಿದ್ದು, ಈ ಕುರಿತಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುತ್ತೂರಿನ ಕೊಡಿಪ್ಪಾಡಿ ಎಂಬಲ್ಲಿರುವ ಗೆಸ್ಟ್ ಹೌಸ್ ಗೆ ದಿನಾಂಕ 05.02.2021 ರಂದು ರಾತ್ರಿ ಬೀಳ್ಕೊಡುಗೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆತನ ಸ್ನೇಹಿತೆ ಬ್ಯಾಂಕ್ ಉದ್ಯೋಗಿಯಾಗಿರುವ ಸಂತ್ರಸ್ಥೆ ಯುವತಿಯು ಬಂದಿದ್ದು, ಸದ್ರಿ ಸಮಯ ಪಾರ್ಟಿಯಲ್ಲಿ ಸುಮಾರು 17 ರಿಂದ 20 ಜನರು ಪಾಲ್ಗೊಂಡಿರುತ್ತಾರೆ. ಪಾರ್ಟಿ ಮುಗಿದ ಬಳಿಕ ಉಳಿದವರು ತೆರಳಿದ್ದು, ತಡರಾತ್ರಿಯಾಗಿರುವುದರಿಂದ ಸಂತ್ರಸ್ಥ ಯುವತಿ ಮತ್ತು ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಸೇರಿ ಒಟ್ಟು 04 ಜನರು ಸದರಿ ವಿಶ್ರಾಂತಿ ಗೃಹದಲ್ಲೇ ಉಳಿದುಕೊಂಡಿರುತ್ತಾರೆ. ಸಂತ್ರಸ್ಥ ಯುವತಿ ಅಲ್ಲೇ ರೂಮೊಂದರಲ್ಲಿ ಮಲಗಿದ್ದು, ಬೆಳಿಗ್ಗೆ 05.00 ಗಂಟೆಗೆ ಸುಮಾರಿಗೆ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಅನಧಿಕೃತವಾಗಿ ಈ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಗೆಸ್ಟ್ ಹೌಸ್ ಗೆ ಪ್ರತಿನಿತ್ಯ ರಾತ್ರಿ ಅಪರಿಚಿತ ಕಾರುಗಳ ಆಗಮನವಾಗುತ್ತಿದ್ದು, ಗೆಸ್ಟ್ ಹೌಸ್ ಒಳಗೆ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ಪಂಚಾಯತ್ ಅನುಮತಿ ಪಡೆಯದೆ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದ್ದು, ಈ ಕುರಿತಂತೆ ಸಮಗ್ರ ತನಿಖೆಗೆ ಸ್ಥಳೀಯರ ಒತ್ತಾಯಿಸಿದ್ದಾರೆ.