ರಾಮನಗರ,ಮಾರ್ಚ್ 28: ನೈಟ್ ರೈಡ್ ಹೊರಟಿದ್ದ ಮೂವರು ವಿದ್ಯಾರ್ಥಿಗಳ ಬೈಕ್ ಲಾರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಮೃತರನ್ನು ಅಭಿಷೇಕ್ (21) ಮತ್ತು ಮನೋಜ್ (21) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಖಾಸಗಿ ಪಿಜಿಯೊಂದರಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕುಣಿಗಲ್ ಕಡೆಗೆ ಒಂದೇ ಬೈಕ್ನಲ್ಲಿ ಮೂವರು ವಿದ್ಯಾರ್ಥಿಗಳು ನೈಟ್ ರೈಡ್ ಹೊರಟಿದ್ದರು. ಈ ವೇಳೆ ಮರೂರು ಹ್ಯಾಂಡ್ ಪೋಸ್ಟ್ ಬಳಿ ಬೈಕ್ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಅಭಿಷೇಕ್ ಹಾಗೂ ಮನೋಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ನವೀನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.