ಕುಂದಾಪುರ ಡಿಸೆಂಬರ್ 28: ಕರಾವಳಿಯಲ್ಲಿ ಹೆಚ್ಚು ಹೆಚ್ಚು ಸರಕಾರಿ ಬಸ್ ಓಡಿಸಲು ಸರಕಾರ ಉತ್ಸುಕವಾಗಿದೆ. ಆದರೆ ಇಲ್ಲಿನ ಖಾಸಗಿ ಬಸ್ ನವರು ಪರ್ಮಿಟ್ ವಿಚಾರದಲ್ಲಿ ಕೋರ್ಟ್ ಗೆ ಹೋಗ್ತಾ ಇರ್ತಾರೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು


ಶನಿವಾರ ಬೆಳಗ್ಗೆ ಬೈಂದೂರಿನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ಕರ್ನೂಲ್ ದುರಂತದ ಬಳಿಕ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ವಸ್ತುಗಳು ಬಿಟ್ಟರೆ ಬೇರೆ ಯಾವುದೇ ವಸ್ತುಗಳನ್ನು ಸಾಗಿಸಲು ಅವಕಾಶಗಳಿಲ್ಲ ಎಂದು ಆದೇಶ ಹೊರಡಿಸಿಲಾಗಿತ್ತು. ಈ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದಾರೆ ಎಂದರು.

2013ರಲ್ಲಿ ಸಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ ಅಪಘಾತಗಳನ್ನು ಗಮನಿಸಿ ಬಸ್‌ಗಳಿಗೆ ಕಡ್ಡಾಯವಾಗಿ ತುರ್ತು ಬಾಗಿಲು ಅಳವಡಿಸಲು ಆದೇಶ ಮಾಡಲಾಗಿತ್ತು. ಈಗಲೂ ಬಸ್ಸಿಗೆ ತುರ್ತು ಬಾಗಿಲುಗಳು ಇಲ್ಲವಾದಲ್ಲಿ ಎಫ್.ಸಿ ಪ್ರಮಾಣ ಪತ್ರ ಕೊಡುವುದಿಲ್ಲ. ಅದರ ನಿರ್ವಹಣೆ ಬಗ್ಗೆ ಆಗಾಗ್ಗೆ ನಿರ್ವಾಹಕರು ಗಮನಿಸುತ್ತಲೇ ಇರಬೇಕು ಎಂದರು.

ಕರಾವಳಿಯಲ್ಲಿ ಖಾಸಗಿ ಬಸ್ಸುಗಳ ಪಾರುಪತ್ಯದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್‌ ಒದಗಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಪರ್ಮಿಟ್ ವಿಚಾರದಲ್ಲಿ ಪದೇ ಪದೇ ಖಾಸಗಿಯವರು ನ್ಯಾಯಾಲಯಕ್ಕೆ ಹೋಗುತ್ತಿರುವ ಹಿನ್ನೆಲೆ ಇದಕ್ಕೆ ತೊಡಕುಗಳಾಗುತ್ತಿವೆ ಎಂದು ಸ್ಪಷ್ಟಪಡಿಸಿದರು.

Share Information