ಸಪ್ತ ಸಾಗರದಾಚೆ ಎಲ್ಲೊ ಸಿನೆಮಾದ ಬಳಿಕ ನಾಪತ್ತೆಯಾಗಿದ್ದ ರಕ್ಷಿತ್ ಶೆಟ್ಟಿ ಇದೀಗ ಸುದ್ದಿಯಲ್ಲಿದ್ದಾರೆ. ಬರೋಬ್ಬರಿ 5 ಸಿನೆಮಾಗಳೊಂದಿಗೆ ರಕ್ಷಿತ್ ಶೆಟ್ಟಿ ಮತ್ತೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ.

ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಬಳಿಕ ಸಿನೆಮಾ ಮಾಡದೇ ನಾಪತ್ತೆಯಾಗಿದ್ದರು. ಅಲ್ಲದೆ ಅವರ ಅಭಿಮಾನಿಗಳು ಕೂಡ ಸಿನೆಮಾ ಎಲ್ಲಿ ಎಂದು ಕೇಳುತ್ತಿದ್ದರು. ಸಿನಿಮಾದ ಬಳಿಕ ಒಮ್ಮೆಲೆ ಕಾಣೆ ಆಗಿಬಿಟ್ಟ ರಕ್ಷಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸಿನಿಮಾದ ಚಿತ್ರಕತೆಗಾಗಿ ‘ಅಂಡರ್ಗ್ರೌಂಡ್’ ಆಗಿದ್ದ ರಕ್ಷಿತ್ ಶೆಟ್ಟಿ ಇದೀಗ ಹೊರಗೆ ಬಂದಾಗ ಐದು ಸಿನಿಮಾಗಳ ಸ್ಕ್ರಿಪ್ಟ್ ಹಿಡಿದುಕೊಂಡು ಹೊರಬಂದಿದ್ದಾರೆ.

ರಕ್ಷಿತ್ ಶೆಟ್ಟಿ ಬರೋಬ್ಬರಿ ಐದು ಸಿನಿಮಾಗಳ ಚಿತ್ರಕತೆಗಳೊಟ್ಟಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ರಿಚರ್ಡ್ ಆಂಟೊನಿ’, ‘ಪುಣ್ಯಕೋಟಿ’ ಜೊತೆಗೆ ಇನ್ನೂ ಮೂರು ಸಿನಿಮಾಗಳ ಚಿತ್ರಕತೆಗಳನ್ನು ರೆಡಿ ಮಾಡಿಕೊಂಡಿದ್ದು, ‘ಚಿತ್ರಕತೆಗಳು ನಾನಂದುಕೊಂಡಂತೆ ಬಂದಿವೆ’ ಎಂದಿದ್ದಾರೆ.

ಇದೀಗ ಮಾರ್ಚ್ ತಿಂಗಳ ಅಂತ್ಯದಿಂದ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಎರಡೂ ಸಿನಿಮಾಗಳ ಕೆಲಸ ಒಟ್ಟಿಗೆ ಪ್ರಾರಂಭ ಆಗಲಿವೆಯಂತೆ. ‘ಪುಣ್ಯಕೋಟಿ’ ಸಿನಿಮಾಕ್ಕೆ ಸಾಕಷ್ಟು ವಿಎಫ್ಎಕ್ಸ್ ಅವಶ್ಯಕತೆ ಇರುವುದರಿಂದ ವಿಎಫ್ಎಕ್ಸ್ ಕೆಲಸಗಳನ್ನು ಈಗಿನಿಂದಲೇ ಆರಂಭಿಸುತ್ತಿದ್ದಾರೆ ರಕ್ಷಿತ್. ‘ರಿಚರ್ಡ್ ಆಂಟೊನಿ’ಗೂ ಸಹ ವಿಎಫ್ಎಕ್ಸ್ ಅವಶ್ಯಕತೆ ಇದೆ ಆದರೆ ಹೆಚ್ಚೇನೂ ಅಲ್ಲ ಹಾಗಾಗಿ ಅದರ ಚಿತ್ರೀಕರಣವನ್ನು ಶೀಘ್ರವೇ ಶುರು ಮಾಡುತ್ತಿದ್ದೀನಿ’ ಎಂದು ಹೇಳಿದ್ದಾರೆ.