Connect with us

LATEST NEWS

ಭಾರೀ ಮಳೆ ಮಂಗಳೂರಿನಲ್ಲಿ ಜಲಾವೃತಗೊಂಡ ನೂರಕ್ಕೂ ಹೆಚ್ಚು ಮನೆಗಳು

ಮಂಗಳೂರು, ಸೆಪ್ಟಂಬರ್ 11: ನಿನ್ನೆಯಿಂದ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನಲ್ಲಿ ಹಲವು ಮನೆಗಳು ಜಲಾವೃತವಾಗಿದೆ. ಮಂಗಳೂರು ಹೊರವಲಯದ ಜಪ್ಪಿನಮೊಗರು, ಚಿಂತನೆ ಮೊದಲಾದ ಪ್ರದೇಶಗಳಲ್ಲಿ ಇನ್ನೂರಕ್ಕೂ ಮಿಕ್ಕಿದ ಮನೆಗಳು ಜಲಾವೃತಗೊಂಡಿದೆ.


ಈ ಭಾಗದಲ್ಲಿ ಹರಿಯುವ ಸಣ್ಣಪುಟ್ಟ ಹಳ್ಳ-ತೊರೆಗಳು ತುಂಬಿ ಹರಿಯುತ್ತಿದ್ದು, ನೀರು ರಸ್ತೆ ಹಾಗೂ ಮನೆಯನ್ನೂ ಆವರಿಸಿದೆ. ಹೆಚ್ಚಾಗಿ ಘಟ್ಟಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ಈ ಭಾಗಗಳು ಮುಳುಗಡೆಯಾಗುತ್ತಿದ್ದು, ಆದರೆ ಈ ಬಾರಿ ಘಟ್ಟ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದ್ದರೂ, ಮಂಗಳೂರು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ರೀತಿಯ ಅವಾಂತರ ಸಂಭವಿಸಿದೆ.

ಮುಳುಗಡೆಯಾಗಿರುವ ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಹಾಗೂ ರಕ್ಷಿಸಲು ಆಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಮನೆಗೆ ನೀರು ಆವರಿಸಿಕೊಂಡಿರುವ ಮನೆ ಮಂದಿ ತಮ್ಮ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳಿದ್ದು, ಇವುಗಳನ್ನೆಲ್ಲಾ ಬಿಟ್ಟು ಬೇರೆಡೆ ಹೋದಲ್ಲಿ ಅವುಗಳ ರಕ್ಷಣೆಗೆ ಸಮಸ್ಯೆಯಾಗುತ್ತದೆ ಎನ್ನುವ ಆತಂಕವನ್ನೂ ಸ್ಥಳೀಯ ಜನ ವ್ಯಕ್ತಪಡಿಸುತ್ತಿದ್ದಾರೆ.


ಜಪ್ಪಿನಮೊಗರು , ಚಿಂತನೆ ಮೊದಲಾದ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಂದರ್ಭದಲ್ಲಿ ಈ ರೀತಿ ಮುಳುಗಡೆಯಾಗುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆಯಾಗಿದೆ. ಇಲ್ಲಿನ ಹೆಚ್ಚಿನ ಭೂ ಭಾಗ ಗದ್ದೆಯಿಂದಲೇ ಕೂಡಿದ್ದು, ಇದೀಗ ಇಲ್ಲಿ ಮನೆ ಸೈಟ್ ಗಳ ನಿರ್ಮಾಣವಾಗಲು ಆರಂಭವಾಗಿದೆ. ಇದರಿಂದಾಗಿ ಇಲ್ಲಿ ಹರಿಯುವ ಚರಂಡಿ ಹಾಗೂ ಇತರ ಹಳ್ಳಗಳನ್ನು ಮುಚ್ಚುವ ಪ್ರಯತ್ನಗಳೂ ನಡೆಯುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಕೃತಕ ನೆರೆಗಳಂತಹ ಸಮಸ್ಯೆಗಳು ಕಾಡುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.


ಮಹಾನಗರ ಪಾಲಿಕೆ ಮನೆ ಸೈಟ್ ಗೆ ಅನುಮತಿಯನ್ನೇನೋ ನೀಡುತ್ತದೆ. ಆದರೆ ಮನೆ ಕಟ್ಟುವ ಮಂದಿ ನೀರು ಹೋಗಲು ಹಾಗೂ ರಸ್ತೆಗೂ ಜಾಗ ಬಿಡದೆ ಕಟ್ಟಡಗಳನ್ನು ನಿರ್ಮಿಸಿದ ಪರಿಣಾಮವೇ ಇದೀಗ ಈ ರೀತಿಯ ಮುಳುಗಡೆಗೆ ಕಾರಣ ಎನ್ನುವ ಆರೋಪವೂ ಇದೆ. ಮಳೆಗಾಲ ಆರಂಭವಾಗುವ ಮೊದಲೇ ಈ ಭಾಗದ ರಾಜ ಕಾಲುವೆಗಳನ್ನು ಹಾಗೂ ಹಳ್ಳಗಳ ಹೂಳು ತೆಗೆಯಲಾಗಿದ್ದರೂ, ಈ ಬಾರಿ ಮತ್ತೆ ಮುಳುಗಡೆಯ ಸಮಸ್ಯೆ ಎದುರಾಗಿದೆ.

ಕರಾವಳಿ ಜಿಲ್ಲೆಯಾದ್ಯಂತ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದ್ದು, ಇಂದು ಮತ್ತೆ ನಾಳೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚನೆಯನ್ನು ಈಗಾಗಲೇ ನೀಡಲಾಗಿದೆ.

Facebook Comments

comments