Connect with us

MANGALORE

ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ

ಮಂಗಳೂರು ಅಗಸ್ಟ್ 9: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಇಂದು ಮಳೆಯ ಅಬ್ಬರ ಮುಂದುವರೆದಿದೆ. ಮಳೆ ಅಬ್ಬರಕ್ಕೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಅಪಾಯದಲ್ಲಿರುವ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

ನೇತ್ರಾವತಿ ನದಿಯಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ನಿನ್ನೆ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ನೀರಿನ ಮಟ್ಟವು ಒಂಬತ್ತು ಮೀಟರ್ ತಲುಪಿದೆ. ಇದರಿಂದಾಗಿ ಬಂಟ್ವಾಳ ಹಾಗೂ ಪಾಣೆಮಂಗಳೂರು ವ್ಯಾಪ್ತಿಯಲ್ಲಿ ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು ಅನೇಕ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.

ಶಂಭೂರು ಅಣೆಕಟ್ಟು ಈಗಾಗಲೇ ತುಂಬಿದ್ದು ಹೆಚ್ಚುವರಿ ನೀರನ್ನು 14 ಗೇಟ್‌ಗಳ ಮೂಲಕ ಬಿಡಲಾಗುತ್ತಿದೆ. ತುಂಬೆ ಅಣೆಕಟ್ಟಿನ ನೀರಿನ ಮಟ್ಟ 7.8 ಮೀಟರ್ ತಲುಪಿದ್ದು ಹೆಚ್ಚುವರಿ ನೀರನ್ನು ಹೊರಬಿಡಲು ಅಣೆಕಟ್ಟಿನ ಎಲ್ಲಾ 30 ಗೇಟ್‌ಗಳನ್ನು ತೆರೆದಿಡಲಾಗಿದೆ. ಬೆಳ್ತಂಗಡಿ ತಾಲೂಕಿನ ಕಲ್ಬೆಟ್ಟು, ದಿಡುಪೆ, ಕೊಲ್ಲಿ ಪ್ರದೇಶದಲ್ಲಿ ನೆರೆ ನೀರು ಕೃಷಿ ಭೂಮಿಗೆ ನುಗ್ಗಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, 52 ಮನೆಗಳ 253 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಶನಿವಾರ ಉತ್ತಮ ಮಳೆಯಾಗಿದ್ದು, ಅಪಾರ ಕೃಷಿಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಹವಾಮಾನ ಇಲಾಖೆ ರಾಜ್ಯ ಕರಾವಳಿಯಲ್ಲಿ ಇಂದು ರೆಡ್‌ ಅಲರ್ಟ್‌ ಘೋಷಿಸಿದ್ದು, 10ರಿಂದ ಆ. 13ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯ ಬಾರದು ಎಂದು ಎಚ್ಚರಿಸಿದೆ.

ಉಡುಪಿ ಜಿಲ್ಲೆಯ ಪೆರಂಪಳ್ಳಿ ಸಮೀಪ ಸುವರ್ಣ ನದಿಯು ಉಕ್ಕಿ ಹರಿಯುತ್ತಿದ್ದು, ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲ ಸ್ಥಳಗಳಲ್ಲಿ ಪ್ರವಾಹದಲ್ಲಿ ಸಿಲುಕಿದ ಹತ್ತರಿಂದ ಹದಿನೈದು ಮನೆಗಳಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾ0ತರ ಮಾಡಲಾಯಿತು.

 

Facebook Comments

comments