Connect with us

    DAKSHINA KANNADA

    ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ – ತಗ್ಗು ಪ್ರದೇಶಗಳು ಜಲಾವೃತ

    ಮಂಗಳೂರು ಜುಲೈ 18: ಕರಾವಳಿಯಾದ್ಯಂತ ಇಂದು ಕೂಡಾ ಭಾರೀ ಮಳೆ‌ ಮುಂದುವರಿದಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗು ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

    ಕುಮಾರಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ನದಿಯು ಧುಮ್ಮಿಕ್ಕಿ ಹರಿಯಲಾರಂಭಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.‌ ನಿನ್ನೆ ಈ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾದ ಕಾರಣ ಮುಳುಗಡೆಯಾಗಿದ್ದ ಕುಮಾರಧಾರಾ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಳಿದಿತ್ತು. ಆದರೆ ಮಧ್ಯಾಹ್ನದ ಬಳಿಕ ಮತ್ತೆ ನೀರಿನ ಹರಿವು ಹೆಚ್ಚಾದ ಕಾರಣ ಸ್ನಾನಘಟ್ಟ ಸೇರಿದಂತೆ ಭಕ್ತಾಧಿಗಳ ಲಗೇಜ್ ರೂಂ ಕೂಡಾ ಮುಳುಗಡೆಯಾಗಿತ್ತು.

    ಇಂದು ಮತ್ತೆ ಈ ಭಾಗದಲ್ಲಿ ಭಾರೀ ಮಳೆ ಸುರಿದ ಕಾರಣ ಸ್ನಾನಘಟ್ಟ ಮತ್ತೆ ಸಂಪೂರ್ಣ ಮುಳುಗಡೆಯಾಗಿದೆ. ವೀಕೆಂಡ್ ನಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಭಕ್ತಾಧಿಗಳಿಗೆ ಸ್ನಾನಘಟ್ಟ ಮುಳುಗಡೆಯಾದ ಕಾರಣ ಭಕ್ತಾಧಿಗಳಿಗೆ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡಲು ತೊಂದರೆಯಾಗಿದೆ. ನದಿಯಲ್ಲಿ ಮುಳುಗಿ ತೀರ್ಥಸ್ನಾ‌ನ ಮಾಡುವ ಬದಲು ಪ್ರವಾಹದ ನೀರಿನಲ್ಲಿ ಭಕ್ತಾಧಿಗಳು ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದಾರೆ. ಹೊಸ್ಮಠದ ಹಳೆ ಸೇತುವೆಯೂ ಮುಳುಗಡೆಯಾಗಿದ್ದು, ಗುಂಡ್ಯಾ ಹೊಳೆಯೂ ತುಂಬಿ ಹರಿಯಲಾರಂಭಿಸಿದೆ.

    ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಚಾರ್ಮಾಡಿ ಸೇರಿದಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯೂ ಪ್ರವಾಹದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಕುಮಾರಧಾರಾ ಹಾಗೂ ನೇತ್ರಾವತಿ ನದಿ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, 27.4 ಅಡಿ ಮಟ್ಟದಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 30 ಅಡಿ ಗಳಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಎರಡು ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದ್ದು, ಮುಳುಗಡೆಯಾಗುವ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಈ ಬೋಟ್ ಗಳನ್ನು ಬಳಸಲಾಗುತ್ತದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗೃಹರಕ್ಷಕದಳದ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply