ಪಶ್ಚಿಮ ಬಂಗಾಳ, ಮಾರ್ಚ್ 30: ಚಿತ್ರೀಕರಣದ ವೇಳೆ ಸಂಭವಿಸಿದ ಅನಿರೀಕ್ಷಿತ ಅವಘಡವೊಂದರಲ್ಲಿ ಬಂಗಾಳಿ ಚಿತ್ರರಂಗದ ಜನಪ್ರಿಯ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ (43) ಅವರು ಸಮುದ್ರದ ಅಲೆಗೆ ಸಿಲುಕಿ ಜಲಸಮಾಧಿಯಾಗಿದ್ದಾರೆ. ಭಾನುವಾರ ಸಂಜೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಗಡಿಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ತಲ್ಸರಿ ಬೀಚ್’ನಲ್ಲಿ ಈ ಹೈದ್ರಾಬಾದ್ ಮೂಲದ ನಟನ ಅಂತ್ಯ ಸಂಭವಿಸಿದೆ.

ಸ್ಟಾರ್ ಜಲ್ಶಾ ವಾಹಿನಿಯ ‘ಭೋಲೆ ಬಾಬಾ ಪಾರ್ ಕರೆಗಾ’ ಎಂಬ ಹೊಸ ಬಂಗಾಳಿ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಚಿತ್ರತಂಡವು ಕಳೆದ ಎರಡು ದಿನಗಳಿಂದ ದಿಘಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿತ್ತು. ಸಂಜೆ ಸುಮಾರು 5:30ರ ಸುಮಾರಿಗೆ ಸಮುದ್ರದ ದಡದಲ್ಲಿ ಪ್ರಮುಖ ದೃಶ್ಯವೊಂದನ್ನು ಸೆರೆಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಅಪ್ಪಳಿಸಿದ ಬೃಹತ್ ಅಲೆಯು ರಾಹುಲ್ ಅವರನ್ನು ಸಮುದ್ರದ ಆಳಕ್ಕೆ ಎಳೆದೊಯ್ದಿದೆ. ತಕ್ಷಣವೇ ಅಲ್ಲಿದ್ದ ಚಿತ್ರತಂಡದ ಸದಸ್ಯರು ಮತ್ತು ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಅಲೆಗಳ ತೀವ್ರತೆ ಹೆಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ.
ಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ನಂತರ ನಟನನ್ನು ನೀರಿನಿಂದ ಹೊರತೆಗೆಯಲಾಯಿತು. ತಕ್ಷಣವೇ ಅವರನ್ನು ದಿಘಾ ಉಪವಿಭಾಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತಪಾಸಣೆ ನಡೆಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. “ಅತಿಯಾದ ನೀರು ಶ್ವಾಸಕೋಶಕ್ಕೆ ಸೇರಿದ ಪರಿಣಾಮ ಉಸಿರುಗಟ್ಟಿ ಸಾವು ಸಂಭವಿಸಿದೆ” ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ನಟ ರಾಹುಲ್ ಬ್ಯಾನರ್ಜಿ ಅವರು ‘ಚಿರೋದಿನಿ ತುಮಿ ಜೆ ಅಮರ್’ ಎಂಬ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದರು. ನೂರಾರು ಚಿತ್ರಗಳು ಮತ್ತು ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಅಕಾಲಿಕ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ನಟನಿಗೆ ಪತ್ನಿ ಪ್ರಿಯಾಂಕಾ ಸರ್ಕಾರ್ ಮತ್ತು ಪುತ್ರ ಸಹಜ್ ಬ್ಯಾನರ್ಜಿ ಇದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಿತ್ರೀಕರಣದ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.