ಉಡುಪಿ ಮಾರ್ಚ್ 22: ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆ ನೀಡದೆ ಸತಾಯಿಸುತ್ತಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ (UUDA) ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಘೋಷಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘುಪತಿ ಭಟ್, “ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಿಸಲು ಸಲ್ಲಿಸಿರುವ 90 ಸೆಂಟ್ಸ್ ಜಾಗದ ನಕ್ಷೆಗೆ ಪ್ರಾಧಿಕಾರ ಅನುಮೋದನೆ ನೀಡುತ್ತಿಲ್ಲ. ಹೈಕೋರ್ಟ್ ಆದೇಶವಿದ್ದರೂ ಆಯುಕ್ತರು ವಿಳಂಬ ಮಾಡುತ್ತಿದ್ದಾರೆ. ಇದರ ಹಿಂದೆ ಶಾಸಕ ಯಶ್ಪಾಲ್ ಸುವರ್ಣ ಅವರ ರಾಜಕೀಯ ದ್ವೇಷ ಅಡಗಿದೆ,” ಎಂದು ನೇರ ಆರೋಪ ಮಾಡಿದರು. ನ್ಯಾಯ ಸಿಗುವವರೆಗೆ ಮಾರ್ಚ್. 23ರಿಂದ ಪ್ರಾಧಿಕಾರದ ಆವರಣದಲ್ಲೇ ಒಬ್ಬಂಟಿಯಾಗಿ ಧರಣಿ ನಡೆಸುವುದಾಗಿ ಅವರು ತಿಳಿಸಿದರು.
ಈ ಹಿಂದೆ ಈ ಜಾಗಕ್ಕೆ ಆಕ್ಷೇಪ ಬಂದಾಗ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಿ ಯಾವುದೇ ಕಾನೂನು ಉಲ್ಲಂಘನೆ ಇಲ್ಲ ಎಂಬುದಾಗಿ ವರದಿ ನೀಡಲಾಗಿತ್ತು. ಅದೇ ರೀತಿ ಸಿಆರ್ಝೆಡ್ನಿಂದಲೂ ಎನ್ಓಸಿ ನೀಡಲಾಗಿದೆ. ವಲಯ ಬದಲಾವಣೆಯನ್ನು ಕೂಡ ಮಾಡಲಾಗಿದೆ. ಹೈಕೋರ್ಟ್ನಿಂದ ಆದೇಶ ನೀಡಿದರೂ ಆಯುಕ್ತರು ಇನ್ನು ಕೂಡ ಅನು ಮೋದನೆ ದೊರೆಯುತ್ತಿಲ್ಲ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಮೂರು ಬಾರಿ ಶಾಸಕನಾದ ನನಗೆ ಈ ಪರಿಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗೆ ಇರಬಹುದು. ಇದಕ್ಕೆಲ್ಲ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ಒತ್ತಡವೇ ಕಾರಣ. ಅವರು ಇದನ್ನು ಆಕ್ಷೇಪ ಸಲ್ಲಿಸಿ ತಡೆ ಹಿಡಿದಿದ್ದಾರೆ. ಶಾಸಕರು ನನ್ನ ಜೊತೆ ರಾಜಕೀಯ ಧ್ವೇಷ ಮಾಡಲಿ. ಅದು ಬಿಟ್ಟು ವೈಯಕ್ತಿಕ ಧ್ವೇಷ ಮಾಡುವುದು ಸರಿಯಲ್ಲ ಎಂದು ಅವರು ದೂರಿದರು.
ರಘುಪತಿ ಭಟ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಯಶ್ಪಾಲ್ ಸುವರ್ಣ, “ಸದ್ರಿ ಜಾಗದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಸ್ಥಳೀಯ ಮೀನುಗಾರರು ಮತ್ತು ಯುವಕ ಮಂಡಲದವರು ದೂರು ನೀಡಿದ್ದಾರೆ. ಈ ಪ್ರಕರಣ ಈಗ ಲೋಕಾಯುಕ್ತ ಮತ್ತು ಹೈಕೋರ್ಟ್ನಲ್ಲಿ ತನಿಖಾ ಹಂತದಲ್ಲಿದೆ. ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದೇನೆ ಹೊರತು, ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.