ನವದೆಹಲಿ , ಏಪ್ರಿಲ್ 03: ಆಮ್ ಆದ್ಮಿ ಪಕ್ಷದ (AAP) ಒಳಗೆ ಕಳೆದ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ಪ್ರಭಾವಿ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ. ಚಡ್ಡಾ ಅವರ ಬದಲಿಗೆ ಪಂಜಾಬ್ನ ಮತ್ತೊಬ್ಬ ಸಂಸದ ಅಶೋಕ್ ಮಿತ್ತಲ್ ಅವರನ್ನು ಈ ಜವಾಬ್ದಾರಿಗೆ ನೇಮಿಸಲಾಗಿದೆ.
![]()
ಗುರುವಾರ (ಏಪ್ರಿಲ್ 2) ಸಂಜೆ ಈ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿರುವ ಆಪ್ ನಾಯಕತ್ವ, ಇನ್ನು ಮುಂದೆ ರಾಘವ್ ಚಡ್ಡಾ ಅವರಿಗೆ ಪಕ್ಷದ ಕೋಟಾದಡಿ ಸದನದಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಮನವಿ ಮಾಡಿದೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಪಕ್ಷದ ಮೂಲಗಳ ಪ್ರಕಾರ, ಅಬಕಾರಿ ನೀತಿ ಹಗರಣದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾದಾಗ ಚಡ್ಡಾ ಅವರು ಮೌನಕ್ಕೆ ಶರಣಾಗಿದ್ದು ಮತ್ತು ವಿದೇಶದಲ್ಲಿದ್ದದ್ದು ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿತ್ತು. ಇತ್ತೀಚೆಗೆ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ನ್ಯಾಯಾಲಯದಿಂದ ಮುಕ್ತಿ ಪಡೆದಾಗಲೂ ಚಡ್ಡಾ ಅವರು ಸಂಭ್ರಮಾಚರಣೆಯಲ್ಲಿ ಭಾಗವಹಿಸದಿರುವುದು ಮತ್ತು ಪಕ್ಷದ ಪ್ರಮುಖ ವೇದಿಕೆಗಳಿಂದ ದೂರ ಉಳಿದಿರುವುದು ಈ ಶಿಸ್ತು ಕ್ರಮಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ತಮ್ಮ ವಿರುದ್ಧದ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶ ನೀಡಿರುವ ರಾಘವ್ ಚಡ್ಡಾ, “ನಮ್ಮನ್ನು ಮೌನಗೊಳಿಸಬಹುದು, ಆದರೆ ಸೋಲಿಸಲಾಗದು” ಎಂದು ಕಿಡಿಕಾರಿದ್ದಾರೆ. “ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ನಾನು ಸತ್ಯಕ್ಕಾಗಿ ಮತ್ತು ಜನರ ಹಿತಕ್ಕಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ” ಎಂದು ಅವರು ಗುಡುಗಿದ್ದಾರೆ.
ಇನ್ನೊಂದೆಡೆ, ನೂತನವಾಗಿ ನೇಮಕಗೊಂಡಿರುವ ಅಶೋಕ್ ಮಿತ್ತಲ್ ಅವರು ಇದೊಂದು ಸಾಮಾನ್ಯ ಸಾಂಸ್ಥಿಕ ಬದಲಾವಣೆ ಎಂದು ಕರೆದಿದ್ದಾರೆ. ಆದರೆ ಪಕ್ಷದ ಕೆಲವು ನಾಯಕರು ಚಡ್ಡಾ ಅವರು ರಾಷ್ಟ್ರೀಯ ವಿಷಯಗಳಿಗಿಂತ ತಮ್ಮ ವೈಯಕ್ತಿಕ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.