LATEST NEWS
ಕತಾರ್ ಮೇಲೆ ಇರಾನ್ ವಾಯು ದಾಳಿ – ತಿರುಗೇಟು ನೀಡುವ ಹಕ್ಕು ಇದೆ ಎಂದ ಕತಾರ್

ಕತಾರ್ ಜೂನ್ 24: ಅಮೇರಿಕಾದ ಮೇಲಿನ ಸಿಟ್ಟಿಗೆ ಕತಾರ್ ನಲ್ಲಿರುವ ಅಮೇರಿಕಾದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ ವಿರುದ್ದ ಇದೀಗ ಗಲ್ಪ್ ರಾಷ್ಟ್ರಗಳು ಗರಂ ಆಗಿದ್ದು, ಕತಾರ್ ತನ್ನ ಮೇಲಿನ ದಾಳಿಗೆ ಪ್ರತಿ ದಾಳಿ ನಡೆಸುವ ಅವಕಾಶ ಇದೆ ಎಂದು ಇರಾನ್ ಗೆ ಎಚ್ಚರಿಕೆ ನೀಡಿದೆ.
ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಭಾಗವಾಗಿ ಕತಾರ್‌ನ ಅಲ್ ಉದೈದ್ ವಾಯುನೆಲೆ ಸೇರಿದಂತೆ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಅನೇಕ ಕ್ಷಿಪಣಿ ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ. ಇರಾನ್‌ನ ಬಹುತೇಕ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕದ ಇಬ್ಬರು ಅಧಿಕಾರಿಗಳು ದೃಢಪಡಿಸಿರುವುದಾಗಿ CNN ವರದಿ ಮಾಡಿದೆ.

ಇರಾನ್ ಸ್ಟೇಟ್ ಟಿವಿ ವರದಿ ಉಲ್ಲೇಖಿಸಿ ಸಮಾ ಟಿವಿ, ಈ ಪ್ರದೇಶದಲ್ಲಿನ ಯುಎಸ್ ನೆಲೆಗಳ ವಿರುದ್ಧ ಈ ಕಾರ್ಯಾಚರಣೆಯನ್ನು ‘ಆಪರೇಷನ್ ಬಶರತ್ ಅಲ್-ಫಾತ್’ ಎಂದು ಕರೆದಿದೆ. CNN ಪ್ರಕಾರ, ಇರಾನ್ ಕತಾರ್ ಮತ್ತು ಇರಾಕ್ ಕಡೆಗೆ ಪ್ರತೀಕಾರದ ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಂತೆ ಕತಾರ್ ಮತ್ತು ಬಹ್ರೇನ್‌ನಲ್ಲಿರುವ ರಾಯಭಾರ ಕಚೇರಿಗಳನ್ನು ಅಮೆರಿಕ ಬಂದ್ ಮಾಡಿರುವುದಾಗಿ ವರದಿಯಾಗಿದೆ.
ಉದ್ವಿಗ್ನತೆಯ ನಡುವೆ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ. ಅಮೆರಿಕದ ನಾಗರಿಕರು ಮುಂದಿನ ಮುನ್ಸೂಚನೆ ಬರುವವರೆಗೂ ಸುರಕ್ಷಿತ ಜಾಗದಲ್ಲಿರುವಂತೆ ದೋಹಾದಲ್ಲಿರುವ ಯುಎಸ್ ರಾಯಭಾರ ಕಚೇರಿ ಸೂಚನೆ ನೀಡಿದೆ. ಇನ್ನು ಕತಾರ್ ಮೇಲಿನ ದಾಳಿಯನ್ನು ಖಂಡಿಸಿರುವ ಸೌದಿ ಅರೇಬಿಯಾ ಕತಾರ್ ಗೆ ತನ್ನ ಸಂಪೂರ್ಣ ಬೆಂಬಲವನ್ನು ದೃಢಪಡಿಸಿದೆ. ಇರಾನ್‌ನ ದಾಳಿಗಳನ್ನು ಸ್ವೀಕಾರಾರ್ಹವಲ್ಲ ಮತ್ತು ಅಸಮರ್ಥನೀಯ ಎಂದು ಕರೆದು ಖಂಡಿಸಿದೆ. ಕತಾರ್ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೂ ತಾನೂ ಬೆಂಬಲ ನೀಡುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.
ತನ್ನ ನೆಲದಲ್ಲಿನ ಅಮೆರಿಕ ಸೇನಾನೆಲೆ ಮೇಲೆ ದಾಳಿ ನಡೆಸಿರುವ ಇರಾನ್ ನಡೆಯನ್ನು ಕತಾರ್ ದೇಶವು ಖಂಡಿಸಿದ್ದು ಮಾತ್ರವಲ್ಲದೇ, ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ತನಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.
ಇರಾನ್ ಆಕ್ರಮ ಣದ ಸ್ವರೂಪ ಮತ್ತು ಪ್ರಮಾಣಕ್ಕೆ ಅನುಗುಣವಾಗಿ ಮತ್ತು ಅಂತಾ ರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ನೇರವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಕತಾರ್ ದೇಶ ಕಾಯ್ದಿರಿಸಿಕೊಂಡಿದೆ ಎಂದು ನಾವು ಖಚಿತಪಡಿಸುತ್ತೇವೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ