ದೋಹಾ/ನವದೆಹಲಿ: ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಕೇಂದ್ರಗಳಲ್ಲಿ ಒಂದಾದ ಕತಾರ್ನ ‘ರಾಸ್ ಲಫಾನ್ ಇಂಡಸ್ಟ್ರಿಯಲ್ ಸಿಟಿ’ಯ ಅನಿಲ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 13 ಕಾರ್ಮಿಕರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಭಾನುವಾರ ನಡೆದ ಈ ಭೀಕರ ದುರಂತದಲ್ಲಿ 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಘಟನೆಯನ್ನು ಕತಾರ್ನ ಇಂಧನ ಸಚಿವ ಸಾದ್ ಅಲ್ ಕಾಬಿ ಅಧಿಕೃತವಾಗಿ ದೃಢಪಡಿಸಿದ್ದಾರೆ.

ಕತಾರ್ನ ಸರ್ಕಾರಿ ಸ್ವಾಮ್ಯದ ‘ಕತಾರ್ ಎನರ್ಜಿ’ ಸಂಸ್ಥೆಗೆ ಸೇರಿದ ಬರ್ಜಾನ್ ಅನಿಲ ಸೌಲಭ್ಯ ಕೇಂದ್ರದಲ್ಲಿ ಕಾರ್ಯಾಚರಣೆಯನ್ನು ಮರು ಪ್ರಾರಂಭಿಸುವ ವೇಳೆ ಈ ಅಗ್ನಿ ಅವಘಡ ಮತ್ತು ಸ್ಫೋಟ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ತುರ್ತು ಪ್ರತಿಕ್ರಿಯಾ ತಂಡಗಳು ಭಾರಿ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.
ಈ ಸ್ಫೋಟದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಕೈಗಾರಿಕಾ ನಗರದಿಂದ ಸುಮಾರು 64 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ದೋಹಾದವರೆಗೂ ಸ್ಫೋಟದ ಭೀಕರ ಸದ್ದು ಕೇಳಿಸಿದೆ. ಇನ್ನು 20 ಕಿಲೋಮೀಟರ್ ದೂರದಿಂದಲೇ ಆಕಾಶಕ್ಕೆ ಚಿಮ್ಮುತ್ತಿದ್ದ ಕಿತ್ತಳೆ ಬಣ್ಣದ ದೈತ್ಯ ಜ್ವಾಲೆಗಳು ಹಾಗೂ ಕರಗದ ಹೊಗೆಯ ಮೋಡಗಳು ಕಂಡುಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೀನ್ಯಾ, ಘಾನಾ, ಟಾಂಜಾನಿಯಾ, ನೈಜೀರಿಯಾ ಮತ್ತು ನೇಪಾಳ ದೇಶಗಳ ಕಾರ್ಮಿಕರಿದ್ದಾರೆ. ಸದ್ಯ ಗಾಯಾಳುಗಳ ಸ್ಥಿತಿ ಸ್ಥಿರವಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ ಗಲ್ಫ್ ಪ್ರದೇಶದಲ್ಲಿ ಅಮೆರಿಕ-ಇರಾನ್ ನಡುವೆ ಇರುವ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಸ್ಫೋಟ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ ಸಚಿವ ಸಾದ್ ಅಲ್ ಕಾಬಿ ಹಾಗೂ ಕತಾರ್ ಗೃಹ ಸಚಿವಾಲಯ, “ಇದು ಯಾವುದೇ ರೀತಿಯ ಬಾಹ್ಯ ದಾಳಿ ಅಥವಾ ವಿಧ್ವಂಸಕ ಕೃತ್ಯವಲ್ಲ. ಇದು ಕೇವಲ ಆಂತರಿಕ ತಾಂತ್ರಿಕ ದೋಷದಿಂದ ಸಂಭವಿಸಿದ ಆಕಸ್ಮಿಕ ಅಪಘಾತ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಘಟನೆಯಿಂದ ಕತಾರ್ನ ಅನಿಲ ರಫ್ತು ಚಟುವಟಿಕೆಗಳ ಮೇಲಾಗಲಿ ಅಥವಾ ಪರಿಸರದ ಮೇಲಾಗಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ತಿಳಿಸಿದ್ದಾರೆ.
ದುರಂತದ ಬೆನ್ನಲ್ಲೇ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತಪಟ್ಟ 12 ಭಾರತೀಯರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ನೆರವನ್ನು ಘೋಷಿಸಿದೆ. ಮೃತರ ಪಾರ್ಥಿವ ಶರೀರಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಿಕೊಡಲು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲ ಇರುವುದಾಗಿ ರಾಯಭಾರ ಕಚೇರಿ ತಿಳಿಸಿದೆ. ಇನ್ನು ಈ ಘಟನೆಯಿಂದಾಗಿ ಚೀನಾ, ದಕ್ಷಿಣ ಕೊರಿಯಾ, ಇಟಲಿ ಮತ್ತು ಬೆಲ್ಜಿಯಂ ಸೇರಿದಂತೆ ಕತಾರ್ನಿಂದ ಅನಿಲ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಆತಂಕ ಸೃಷ್ಟಿಯಾಗಿದೆ.