ಮಂಗಳೂರು ಮಾರ್ಚ್ 12: ಪಿವಿಎಸ್ ಗ್ರೂಪ್ನ ಆಡಳಿತ ಹಾಗೂ ಆಸ್ತಿಪಾಸ್ತಿಗಳನ್ನು ಕಬಳಿಸುವ ಉದ್ದೇಶದಿಂದ ಕೆಲ ವ್ಯಕ್ತಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯ ಆಡಳಿತವನ್ನು ತಾವು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸ್ಥೆಯ ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲವರು ಆಸ್ತಿ ಕಬಳಿಸುವ ದುರುದ್ದೇಶದಿಂದ ಕೃಷ್ಣದತ್ತ ಎಂಬ ವ್ಯಕ್ತಿಯನ್ನು ಬಳಸಿಕೊಂಡು ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ತಾವು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು, “ಕೃಷ್ಣದತ್ತ ನನ್ನ ಮಗನಲ್ಲ” ಎಂಬ ತಡೆಯಾಜ್ಞೆಯನ್ನು ತಂದಿರುವುದಾಗಿ ಅವರು ಬಹಿರಂಗಪಡಿಸಿದರು. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಅವರು ವಿನಂತಿಸಿದರು.
ನನ್ನ ಪತಿಯ ನಿಧನದ ನಂತರ ವಸಂತಿ ಎಚ್. ಅವರು ನನಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ನನ್ನ ಅಜ್ಜನ ಪತ್ನಿಯ ತಂಗಿಯ ಮಗಳಾದ ಇವರು ಬಾಲ್ಯದಿಂದಲೂ ನಮ್ಮೊಂದಿಗಿದ್ದಾರೆ. ನಾವಿಬ್ಬರೂ ಜೊತೆಗೂಡಿಯೇ ಪಿವಿಎಸ್ ಕಂಪೆನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ,” ಎಂದು ಸರೋಜಿನಿ ಕುಶೆ ಇದೇ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೈಶ್ಯ ಎಜುಕೇಶನ್ ಸೊಸೈಟಿಯ ಸಂತೋಷ್ ಚಂದ್ರ, ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗ್ವೇಕರ್ ಉಪಸ್ಥಿತರಿದ್ದರು.