Connect with us

    DAKSHINA KANNADA

    ಪುತ್ತೂರಿನಲ್ಲೊಬ್ಬ ಹೃದಯವಂತ ಕೂಲಿ ಕಾರ್ಮಿಕ, ಸಂಕಷ್ಟಗಳಿಗೆ ಸ್ಪಂದಿಸುವುದೇ ಇವರ ಕಾಯಕ

    ಪುತ್ತೂರಿನಲ್ಲೊಬ್ಬ ಹೃದಯವಂತ ಕೂಲಿ ಕಾರ್ಮಿಕ, ಸಂಕಷ್ಟಗಳಿಗೆ ಸ್ಪಂದಿಸುವುದೇ ಇವರ ಕಾಯಕ

    ಪುತ್ತೂರು,ಡಿಸೆಂಬರ್ 9: ತನ್ನ ಸ್ವಂತ ಲಾಭಗೋಸ್ಕರ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುವವರು ಜನರ ನಡುವೆ ಯಾವುದೇ ಫಲಾಪೇಕ್ಷೆಯಿಲ್ಲದೆ ಜನರ ಕಷ್ಟಕ್ಕೆ ಮಿಡಿಯುವ ಹೃದಯಗಳಿರುವುದು ವಿರಳ.

    ಇಂಥ ಒರ್ವ ಹೃದಯವಂತ ವ್ಯಕ್ತಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದ್ದಾರೆ. ಕೇವಲ 6 ನೇ ತರಗತಿ ಕಲಿತು ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಇವರ ಪ್ರಯತ್ನದ ಫಲವೇ ಇಂದು ಸರಕಾರದಿಂದ ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೊಳಪಟ್ಟ ಸಾವಿರಾರು ಎಂಡೋ ಪೀಡಿತ ಕುಟುಂಬಗಳಿಗೆ ಭರವಸೆಯ ಬೆಳಕನ್ನು ನೀಡಿದೆ.

    ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ನಿವಾಸಿ ಸಂಜೀವ ಕಬಕ ಅವರ ತೆರೆಮರೆಯ ಕೆಲಸದ ಸ್ಟೋರಿ.

    ಸಿಮೆಂಟ್ ನ ಸಿದ್ಧ ಪರಿಕರಗಳ ಉತ್ಪಾದನಾ ಘಟಕದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಈ ವ್ಯಕ್ತಿ ದೇಶ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಗುರುತಿಸಲ್ಪಟ್ಟವರು.

    6 ನೇ ತರಗತಿಯವರೆಗೆ ಓದಿರುವ ಇವರ ಸಾಧನೆ ಶಿಕ್ಷಣದಲ್ಲಿ ಉನ್ನತ ಸ್ಥಾನಕ್ಕೇರಿದವರನ್ನೂ ಮೀರಿಸುವಂತಹುದು. ತನ್ನ ಜೀವನದಲ್ಲಿ ಎದುರಾದ ಸಮಸ್ಯೆಯಿಂದ ಅನುಭವವನ್ನು ಪಡೆದುಕೊಂಡ ಇವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡವರು.

    ಕಾರ್ಮಿಕರ ಸಮಸ್ಯೆ, ವೃದ್ಧರ ಸಮಸ್ಯೆ, ಅಂಗವಿಕಲರ ಸಮಸ್ಯೆ ಹೀಗೆ ಇವರು ಕೈಯಾಡಿಸದ ಕ್ಷೇತ್ರವಿಲ್ಲ. ಅದರಲ್ಲೂ ಸರಕಾರದ ತಪ್ಪಿನಿಂದಾಗಿ ತಮ್ಮ ಜೀವನವನ್ನೇ ಕಳೆದುಕೊಂಡ ಕರಾವಳಿ ಭಾಗದಲ್ಲಿ ಹೆಚ್ಚಾಗಿರುವ ಎಂಡೋಸಲ್ಫಾನ್ ಪೀಡಿತರ ಕುಟುಂಬಗಳ ಪಾಲಿಗೆ ಇವರು ಬೆಳಕಾಗಿ ಬಂದವರು ಎಂದರೆ ತಪ್ಪಾಗಲಾರದು.

    ಎಂಡೋಸಲ್ಫಾನ್ ಸಂತ್ರಸ್ತರ ಕುರಿತ ಮಾಹಿತಿ, ಈ ದುರ್ಘಟನೆಗಳಿಗೆ ಕಾರಣ ಹೀಗೆ ಎಲ್ಲಾ ಮಾಹಿತಿಗಳನ್ನು ಪಡೆದು ಅದನ್ನು ಸರಕಾರ, ಹೈಕೋರ್ಟ್, ಸುಪ್ರೀಂಕೋರ್ಟ್ ಗಮನಕ್ಕೆ ತರುವಲ್ಲಿ ನಡೆದ ಪ್ರಯತ್ನಗಳ ಹಿಂದೆ ಸಂಜೀವರ ಪರಿಶ್ರಮವಿದೆ.

    ಇವರು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲೇ ಕರಾವಳಿ ಭಾಗದ ಎಂಡೋಸಲ್ಫಾನ್ ಕುಟುಂಬಗಳಿಗೆ ಪರಿಹಾರ ಹಾಗೂ ಇತರ ಅವಶ್ಯಕತೆಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

    ಹಲವಾರು ವರ್ಷ ತಮ್ಮಲ್ಲಿ ದುಡಿಸಿಕೊಂಡು ಬಳಿಕ ತಮ್ಮ ಕಾರ್ಮಿಕರೇ ಅಲ್ಲ ಎಂದು ಕೈ ಬಿಟ್ಟ ಕಂಪನಿಗಳ ಹಲವಾರು ಕಾರ್ಮಿಕರಿಗೆ ಅವರಿಗೆ ದೊರಕಬೇಕಾದ ಪರಿಹಾರವನ್ನು ದೊರಕಿಸಿದ ಪರದೆಯ ಹಿಂದಿನ ಹೋರಾಟಗಾರ ಕೂಡಾ ಇವರಾಗಿದ್ದಾರೆ.

    ಆದರೆ ಈ ಎಲ್ಲಾ ಕೆಲಸಗಳು ಕೇವಲ ಸಮಸ್ಯೆಗಳಲ್ಲಿ ಸಿಲುಕಿದವರ ಪರಿಹಾರಕ್ಕೆ ಮಾತ್ರವಾಗಿದ್ದು, ಸಮಸ್ಯೆ ಬಗೆಹರಿದಾಗ ಸಂಕಷ್ಟಕ್ಕೊಳಗಾದವನ ಮುಖದಲ್ಲಿ ಮೂಡುವ ಮಂದಹಾಸವೇ ತನ್ನ ಸಂತೃಪ್ತಿ ಎನ್ನುತ್ತಾರೆ ಸಂಜೀವ ಕಬಕ.

    ಬಳಕೆದಾರರ ವೇದಿಕೆಯ ಮೂಲಕ ದೇಶ ವಿದೇಶಗಳಲ್ಲಿ ಹೆಸರಾದ ಉಡುಪಿಯ ಡಾ. ರವೀಂದ್ರನಾಥ್ ಶಾನುಭೋಗ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವರು ಯಾವತ್ತೂ ತಮ್ಮ ಈ ವೃತ್ತಿಯನ್ನು ಹಣಕ್ಕಾಗಿಯೋ, ಅಥವಾ ಇನ್ಯಾವುದೋ ಆಶೆಗಾಗಿ ಪಣಕ್ಕಿಟ್ಟವರಲ್ಲ.

    ದಿನಗೂಲಿಯಲ್ಲೇ ತಮ್ಮ ಪುಟ್ಟ ಸಂಸಾರವನ್ನು ಸಾಗಿಸುತ್ತಿರುವ ಸಂಜೀವರು ತಮ್ಮನ್ನು ನಂಬಿ ಬಂದವರನ್ನು ಯಾವತ್ತೂ ಕೈ ಬಿಟ್ಟವರಲ್ಲ.

    ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಕ್ರೀಯ ಕಾರ್ಯಕರ್ತರಾಗಿರುವ ಸಂಜೀವ ಕಬಕ ರಣರಂಗಕ್ಕೆ ಧುಮುಕದೆ ತೆರೆಯ ಹಿಂದೆಯೇ ಈ ಎಲ್ಲಾ ಕಾರ್ಯಗಳನ್ನು ಮಾಡಿದ್ದಾರೆ ಎನ್ನುತ್ತಾರೆ ಪುತ್ತೂರು ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿರುವ ಡಾ.ನಿತ್ಯಾನಂದ ಪೈ.
    ಎಂಡೋ ಸಲ್ಫಾನ್ ಸಂತ್ರಸ್ತರಿಗಾಗಿ ಪುನರ್ವಸತಿ ಕೇಂದ್ರ, ಬಸ್ ಪಾಸ್, ಮಾಸಿಕ ಪಿಂಚಣಿ ಸೇರಿದಂತೆ ಹಲವು ಸರಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಇವರ ಪಾತ್ರ ಮುಂಚೂಣಿಯಲ್ಲಿದೆ.

    ಆದರೆ ಇಂದು ಕೆಲವು ವ್ಯಕ್ತಿಗಳು ಎಂಡೋಸಲ್ಫಾನ್ ಸಂತ್ರಸ್ತರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿ ಪತ್ರಿಕೆಗಳಲ್ಲಿ ಹೆಸರಿಗೋಸ್ಕರ ಮಾತ್ರವೇ ಸೀಮಿತವಾಗಿದ್ದಾರೆ.

    ಇಂಥ ವ್ಯಕ್ತಿಗಳು ಸಂಜೀವ ಕಬಕ ಮಾಡಿದ ಕೆಲಸದ ಒಂದಂಶವನ್ನು ಮಾಡಿದರೂ ಎಂಡೋ ಸಂತ್ರಸ್ತರ ಕುಟುಂಬಗಳು ಇಂದು ನಿಶ್ಟಿಂತೆಯ ಬದುಕನ್ನು ಬಾಳ ಬಹುದಿತ್ತು.

     

    Share Information
    Advertisement
    Click to comment

    You must be logged in to post a comment Login

    Leave a Reply