Connect with us

    DAKSHINA KANNADA

    ಸೇವಿರೆಯಲ್ಲಿ ಕೆರೆಯಾದ ರಸ್ತೆ ಇದು ಪುತ್ತೂರು ನಗರಸಭೆಯ ಅವ್ಯವಸ್ಥೆ

    ಪುತ್ತೂರು,ಆಗಸ್ಟ್ 28: ಮಾತೆತ್ತಿದರೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ಪುತ್ತೂರು ನಗರಸಭೆಯ ನೈಜ ಚಿತ್ರಣ ಇದೀಗ ಒಂದೊಂದಾಗಿ ಬಯಲಾಗುತ್ತಿದೆ.ಮಳೆಗಾಲದಲ್ಲಿ ನೀರು ಹರಿಯಲು ಸರಿಯಾಗಿ ಚರಂಡಿ ವ್ಯವಸ್ಥೆಯನ್ನು ಮಾಡದ ಹಿನ್ನಲೆಯಲ್ಲಿ ಇದೀಗ ರಸ್ತೆಯೊಂದು ನೀರಿನಲ್ಲಿ ಮುಳುಗಿ ಹೋಗಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದೆ. ಪುತ್ತೂರು ನಗರದ ಸೇವಿರೆ ಎಂಬಲ್ಲಿ ಮುಚ್ಚಿದ ಚರಂಡಿಯನ್ನು ದುರಸ್ತಿ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಮನವಿ ನೀಡುತ್ತಿದ್ದರೂ,ಇಂದಿನವರೆಗೂ ನಗರಸಭೆ ಇತ್ತ ಗಮನವನ್ನೇ ಹರಿಸಿಲ್ಲ.
    ಅಭಿವೃದ್ಧಿಯ ಕುರಿತು ಮಾತನಾಡುವ ಪುತ್ತೂರು ನಗರಸಭೆಯ ವ್ಯಾಪ್ತಿಗೆ ಬರುವ ರಕ್ತೇಶ್ವರಿ ವಠಾರದ ಸೇವಿರೆ ಸಂಪರ್ಕಿಸುವ ರಸ್ತೆಯನ್ನು ನೋಡಿದರೆ, ರಸ್ತೆಯಲ್ಲೇ ಕರೆ ನಿರ್ಮಿಸಿ ವಿನೂತನ ಅವಿಷ್ಕಾರವನ್ನೇನೋ ಮಾಡಿದರೇ ಎನ್ನುವ ಆಶ್ವರ್ಯ ಉಂಟಾಗದಿರದು. ಆದರೆ ಕೆರೆಯ ಸಮೀಪ ಹೋಗಿ ನೋಡಿದಾಗಲೇ ತಿಳಿಯೋದು ಇದು ನಗರಸಭೆಯ ನಿರ್ಲಕ್ಷ್ಯದಿಂದ ಉಂಟಾದ ಕೃತಕ ಕೆರೆಯೆಂದು. ಪುತ್ತೂರು ನಗರಸಭೆಯ ಕೂಗಳತೆ ದೂರದಲ್ಲಿರುವ ಈ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆಯಿದ್ದರೂ, ಹೊಸ ಮನೆ ನಿರ್ಮಿಸಿದ ಕೆಲವು ವ್ಯಕ್ತಿಗಳು ಚರಂಡಿಯನ್ನು ಮುಚ್ಟಿ ಮನೆಗಳಿಗೆ ರಸ್ತೆಯನ್ನು ಮಾಡಿದ್ದಾರೆ. ಈ ಮನೆಗಳನ್ನು ಕಟ್ಟಲು ಅನುಮತಿ ನೀಡಿದ ನಗರಸಭೆ ಚರಂಡಿ ವ್ಯವಸ್ಥೆಯನ್ನು ಮುಚ್ಚಲಾಗಿದ್ದರೂ, ಇದರ ಈ ಬಗ್ಗೆ ಗಮನಹರಿಸದೇ ಹೋದ ಕಾರಣ ಮಳೆಗಾಲದಲ್ಲಿ ಸೇವಿರೆ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲೇ ಕೆರೆ ನಿರ್ಮಾಣಗೊಂಡಿದೆ. ಚರಂಡಿಯನ್ನು ಸರಿಪಡಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿದರೂ, ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ.
    ಚರಂಡಿ ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಹಲವು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸ್ವತಹ ಜಿಲ್ಲಾಧಿಕಾರಿಯೇ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಪುತ್ತೂರು ನಗರಸಭೆಯ ಆಯುಕ್ತರಿಗೆ ನಿರ್ದೇಶನ ನೀಡಿದ್ದರೂ, ಜಿಲ್ಲಾಧಿಕಾರಿಯವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಇಲ್ಲಿ ನೀಡಲಾಗಿಲ್ಲ. ವಿಪರೀತ ಮಳೆಯಿದ್ದ ಸಂದರ್ಭದಲ್ಲಿ ಆಳೆತ್ತರಕ್ಕೆ ನೀರು ರಸ್ತೆಯಲ್ಲೇ ಶೇಖರಣೆಯಾಗುತ್ತಿದ್ದು, ಈ ರಸ್ತೆಯ ಮೂಲಕ ಅಂಗನವಾಡಿ ಸೇರಿದಂತೆ ಶಾಲೆಗೆ ಹೋಗುವ ಮಕ್ಕಳು ಪ್ರಯಾಸದಿಂದ ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ರಸ್ತೆಯ ಒಂದು ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮದೇ ಖರ್ಚಿನಲ್ಲಿ ಚರಂಡಿಯನ್ನು ಮಾಡಿಸಿದ್ದರೂ, ಇನ್ನೊಂದು ಪಕ್ಕದಲ್ಲಿರುವ ಕೆಲವು ಮನೆ ಮಂದಿ ಇದ್ದ ಚರಂಡಿಯನ್ನೂ ಮುಚ್ಚಿದ ಪರಿಣಾಮ ಇಲ್ಲಿ ಇದೀಗ ಈ ಸಮಸ್ಯೆ ತಲೆದೋರಿದೆ. ಅಲ್ಲದೆ ರಸ್ತೆಯಲ್ಲಿ ಶೇಖರಿಸಲ್ಪಟ್ಟ ನೀರೀಗ ಪಕ್ಕದ ಕೃಷಿ ತೋಟಕ್ಕೂ ಹಾನಿ ಮಾಡುತ್ತಿದ್ದು, ನೀರಿನಿಂದ ಕೇವಲ ರಸ್ತೆ ಮಾತ್ರವಲ್ಲ ಕೃಷಿಭೂಮಿಗೂ ತೊಂದರೆಯಾಗುತ್ತಿದೆ. ನೀರು ಹರಿಯುವ ಚರಂಡಿಯ ಸುತ್ತ ಹುಲ್ಲ ಬೆಳೆದಿದ್ದು, ಚರಂಡಿಯ ತುಂಬಾ ಕಸಕಡ್ಡಿಗಳೂ ತುಂಬಿಕೊಂಡಿವೆ. ಈ ಕಾರಣಕ್ಕಾಗಿ ಇರುವ ಚರಂಡಿಯಲ್ಲಿಯೂ ನೀರು ಹರಿಯದಂತಹ ಸ್ಥಿತಿಯೂ ಇಲ್ಲಿದೆ. ಇನ್ನಾದರೂ ಪುತ್ತೂರು ನಗರಸಭೆ ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುವತ್ತ ಚಿತ್ತ ಹರಿಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply