ಪುತ್ತೂರು ಜೂನ್ 30: ಹಳೇ ಮೈಸೂರು ಭಾಗದವರನ್ನೇ ಒಕ್ಕಲಿಗರು ಅನ್ನೋದು, ‘ಮಂಗಳೂರು ಕಡೆಯವರು ದೊಡ್ಡ ಗೌಡರಲ್ಲ ” ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕರು ತಕ್ಷಣವೇ ತಮ್ಮ ಜವಾಬ್ದಾರಿಯುತ ಸ್ಥಾನಕ್ಕೆ ಚ್ಯುತಿ ತರುವಂತಹ ಈ ಹೇಳಿಕೆಯನ್ನು ಹಿಂಪಡೆದು, ಸಮುದಾಯದ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರು, ಶಾಸಕರ ಬೇಜವಾಬ್ದಾರಿಯುತ ಹೇಳಿಕೆಯನ್ನು ಕಠಿಣ ಶಬ್ದಗಳಿಂದ ಖಂಡಿಸಿದರು.
“ಶಾಸಕ ವಿಶ್ವನಾಥ್ ಅವರು ಒಕ್ಕಲಿಗ ಸಮುದಾಯವನ್ನು ಭೌಗೋಳಿಕವಾಗಿ ವಿಭಜಿಸುವ ಮತ್ತು ಕರಾವಳಿಯ ಒಕ್ಕಲಿಗ ಗೌಡರನ್ನು ಕೀಳಾಗಿ ಕಾಣುವ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಕರಾವಳಿ ಹಾಗೂ ದಕ್ಷಿಣ ಕನ್ನಡ ಭಾಗದ ಒಕ್ಕಲಿಗ ಗೌಡ ಸಮುದಾಯಕ್ಕೂ ತನ್ನದೇ ಆದ ಭವ್ಯ ಇತಿಹಾಸ ಮತ್ತು ಗೌರವವಿದೆ. ಶಾಸಕರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಗೌಡ ಸಮುದಾಯದ ವತಿಯಿಂದ ಕಾನೂನಾತ್ಮಕವಾಗಿ ಹಾಗೂ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು” ಎಂದು ಸುಂದರ ಗೌಡ ಅವರು ಖಡಕ್ ಎಚ್ಚರಿಕೆ ನೀಡಿದರು.