ಪುತ್ತೂರು ಜನವರಿ 31: ಪುತ್ತೂರು ಶಾಸಕ ಅಶೋಕ್ ರೈ ಅವರ ಕಾರ್ಯವೈಖರಿಯನ್ನು ಆಂದ್ರಪ್ರದೇಶದ ರಾಜ್ಯಪಾಲ ಮತ್ತು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೋಗಳಿದ್ದಾರೆ. ನಿಮ್ಮ ಕಾಲದಲ್ಲಿ ಪುತ್ತೂರಿನ ಚಿತ್ರಣ ಬದಲಾಗುತ್ತದೆ ಎಂದು ಹೇಳಿದ್ದಾರೆ.

ಜಿಲ್ಲಾ ನ್ಯಾಯಾಂಗ, ದಕ್ಷಿಣಕನ್ನಡ ಲೋಕೋಪಯೋಗಿ ಇಲಾಖೆ ಹಾಗು ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 31 ರಂದು ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ನ್ಯಾಯಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಕೀಲರ ಸಂಘಗಳು ಕೇವಲ ವಕಾಲತು ಮಾತ್ರ ಮಾಡೋದಲ್ಲದೆ, ಕಕ್ಷಿದಾರರ ಹಿತ ಕಾಯುವ ಕಾರ್ಯವನ್ನೂ ಮಾಡಬೇಕಿದೆ ಎಂದರು. ಕಕ್ಷಿದಾರನಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದ್ದು, ನ್ಯಾಯಾಲಯದಲ್ಲಿ ಕಕ್ಷೀದಾರನಿಗೆ ಭಯರಹಿತ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದರು. ಸಮಾಜದಲ್ಲಿ ಕಾಣುವುದೆಲ್ಲಾ ಸರಿಯಿಲ್ಲ ಎನ್ನುವ ಮನಸ್ಥಿತಿಯಿಂದ ನ್ಯಾಯಾಧೀಶರು, ವಕೀಲರು ಹೊರಬರಬೇಕಿದೆ. ಮೊದಲಿಗೆ ನಾವು ನ್ಯಾಯಸಮ್ಮತವಾಗಿ ನಡೆಯುವುದರ ಮೂಲಕ ಸಾರ್ವಜನಿಕರಿಂದಲೂ ಅದೇ ರೀತಿಯ ಪರಿವರ್ತನೆಯನ್ನು ನಿರೀಕ್ಷಿಸಬೇಕಿದೆ ಎಂದರು.

ನ್ಯಾಯಾಂಗ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಿದ ವಿಶ್ರಾಂತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರಿಗೆ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಟಿ.ನರೇಂದ್ರ ಪ್ರಸಾದ್, ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.