ಪುತ್ತೂರು ಜೂನ್ 23: “ವಿದ್ಯುತ್ ಎನ್ನುವುದು ಸಾರ್ವಜನಿಕರು ಹಣ ಕೊಟ್ಟು ಪಡೆಯುವ ಒಂದು ಸೇವೆ. ಖಾಸಗೀಕರಣವನ್ನು ಕೇವಲ ವಿರೋಧಿಸುವುದಲ್ಲ, ಮೊದಲು ಗ್ರಾಹಕರಿಗೆ ನೀಡುವ ಸೇವೆಯನ್ನು ಉತ್ತಮಪಡಿಸಲು ಪ್ರಯತ್ನಿಸಿ. ಜನರ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ಕಲಿಯಿರಿ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮೆಸ್ಕಾಂ ಅಧಿಕಾರಿಗಳು ಹಾಗೂ ನೌಕರಿಗೆ ಪಾಠ ಮಾಡಿದ್ದಾರೆ.

ಮೆಸ್ಕಾಂ ನ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಶಾಸಕ ಅಶೋಕ್ ರೈ ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಉದಾಹರಿಸಿದ ಶಾಸಕರು, “ಖಾಸಗಿ ಕಟ್ಟಡಗಳು ಎಷ್ಟು ಸುಸಜ್ಜಿತವಾಗಿರುತ್ತವೆ, ಅದೇ ಸರ್ಕಾರಿ ಕಟ್ಟಡಗಳು ಹೇಗಿರುತ್ತವೆ ಎಂಬುದನ್ನು ಗಮನಿಸಿ. ಸರ್ಕಾರ ಎಂದರೆ ಯಾರೋ ಹಣ ಕೊಡುತ್ತಾರೆ, ಹೇಗಿದ್ದರೂ ನಡೆಯುತ್ತದೆ ಎನ್ನುವ ಉದಾಸೀನ ಮನೋಭಾವ ನೌಕರರಲ್ಲಿದೆ. ಮೊದಲು ಈ ಮನಸ್ಥಿತಿಯಿಂದ ಸಿಬ್ಬಂದಿಗಳು ಹೊರಬರಬೇಕು. ಉತ್ತಮ ಸೇವೆ ನೀಡಿದರೆ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ. ಖಾಸಗಿ ಕಂಪನಿಗಳು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರಿಂದಲೇ ಜನರು ಅವರತ್ತ ಆಕರ್ಷಿತರಾಗುತ್ತಾರೆ” ಎಂದು ಚಾಟಿ ಬಸಿದರು.
“ಇವತ್ತು ಸಾರ್ವಜನಿಕರು ಅಂಗಡಿಗೆ ಹೋಗಿ ಸಾಮಾನು ಖರೀದಿಸುವಷ್ಟೇ ಸರಳವಾಗಿ ವಿದ್ಯುತ್ ಸಂಪರ್ಕ ಸಿಗಬೇಕು. ಆದರೆ, ಒಂದು ಸಣ್ಣ ವಿದ್ಯುತ್ ಕನೆಕ್ಷನ್ ಪಡೆಯಲು ಜನಸಾಮಾನ್ಯರಿಗೆ 25 ಅನಾವಶ್ಯಕ ಕಾನೂನುಗಳನ್ನು ಮುಂದಿಡಲಾಗುತ್ತದೆ. ಮೊದಲು ಇಂತಹ ಕಿರಿಕಿರಿ ನಿಯಮಗಳಿಂದ ಹೊರಬನ್ನಿ. ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕೈಕೊಟ್ಟು ಮೂರು ದಿನಗಳಾದರೂ ಸಮಸ್ಯೆ ಬಗೆಹರಿಯುವುದಿಲ್ಲ. ಸಿಬ್ಬಂದಿಗಳಿಗೆ ಫೋನ್ ಮಾಡಿದರೆ ಕರೆಯನ್ನು ಸ್ವೀಕರಿಸುವುದಿಲ್ಲ. ನಾವೇ ಎಷ್ಟೋ ಬಾರಿ ಬಿಜಿಯಿದ್ದಾಗ ಕಾಲ್ ಸ್ವೀಕರಿಸಲು ಸಾಧ್ಯವಾಗದಿದ್ದರೆ, ಆಮೇಲೆ ಮಿಸ್ ಕಾಲ್ ನೋಡಿ ಮರಳಿ ಫೋನ್ ಮಾಡುತ್ತೇವೆ. ಅದೇ ರೀತಿ ನೀವೂ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ” ಎಂದು ಶಾಸಕರು ಬುದ್ಧಿವಾದ ಹೇಳಿದರು.
ಇದೇ ವೇಳೆ, ಮೆಸ್ಕಾಂ ನೌಕರರ ಹಿತರಕ್ಷಣೆಯ ಕುರಿತು ಮಾತನಾಡಿದ ಶಾಸಕರು, “ಮೆಸ್ಕಾಂ ಸಂಸ್ಥೆಯು ಸರ್ಕಾರದ ಅಧೀನದಲ್ಲೇ ಇರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನೌಕರರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಸೇವೆ ನೀಡುವುದು ನಿಮ್ಮ ಆದ್ಯತೆಯಾಗಬೇಕು” ಎಂದು ಸ್ಪಷ್ಟಪಡಿಸಿದರು.