ಪುತ್ತೂರು ಮಾರ್ಚ್ 13: ಮಧ್ಯಪ್ರಾಚ್ಯದ ಯುದ್ಧದ ಜ್ವಾಲೆ ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರತೊಡಗಿದೆ. ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಬೆಲೆ ಏರಿಕೆಯಿಂದಾಗಿ ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈಗ ಅಡುಗೆಗಾಗಿ ಮತ್ತೆ ಕಟ್ಟಿಗೆಯನ್ನು ಬಳಸಲು ನಿರ್ಧರಿಸಲಾಗಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ಸರಾಸರಿ 3 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾನ ನಡೆಯುತ್ತದೆ. ಇದಕ್ಕಾಗಿ ನಿತ್ಯ 4 ರಿಂದ 5 ಗ್ಯಾಸ್ ಸಿಲಿಂಡರ್ಗಳು ವ್ಯಯವಾಗುತ್ತಿದ್ದವು. ಆದರೆ, ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಲೆಯೂ ಗಗನಕ್ಕೇರಿದೆ. ಈ ಸವಾಲನ್ನು ಎದುರಿಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಈಗ ಕಟ್ಟಿಗೆ ಒಲೆಗಳನ್ನು ಸಿದ್ಧಪಡಿಸಿ ಆಹಾರ ತಯಾರಿಕೆಯನ್ನು ಆರಂಭಿಸಿದೆ.

ಇನ್ನು ಏಪ್ರಿಲ್ ತಿಂಗಳಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 2.5 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಅಷ್ಟು ಜನರಿಗೆ ಅನ್ನಸಂತರ್ಪಣೆ ಮಾಡಲು ಭಾರಿ ಪ್ರಮಾಣದ ಇಂಧನದ ಅವಶ್ಯಕತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈಗಿನಿಂದಲೇ ಕಟ್ಟಿಗೆ ಸಂಗ್ರಹಕ್ಕೆ ಸಮಿತಿ ಮುಂದಾಗಿದೆ.
ಭಕ್ತರಿಗೆ ಮನವಿ:

ಈಗಾಗಲೇ ಮೂರು ಲೋಡ್ ಕಟ್ಟಿಗೆ ಕ್ಷೇತ್ರಕ್ಕೆ ಬಂದಿದ್ದು, ಇನ್ನಷ್ಟು ಸಂಗ್ರಹದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಬಳಿ ಕಟ್ಟಿಗೆ ಇದ್ದಲ್ಲಿ ದೇವಸ್ಥಾನಕ್ಕೆ ನೀಡುವಂತೆ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ. ಭಕ್ತರು ಮಾಹಿತಿ ನೀಡಿದರೆ ದೇವಸ್ಥಾನದ ವತಿಯಿಂದಲೇ ವಾಹನ ಕಳುಹಿಸಿ ಕಟ್ಟಿಗೆಯನ್ನು ತರಲು ನಿರ್ಧರಿಸಲಾಗಿದೆ.