ಪುತ್ತೂರು ಎಪ್ರಿಲ್ 8: ಎರಡು ಕುಟುಂಬಗಳ ವೈಯಕ್ತಿಕ ಕಲಹಕ್ಕೆ ಪುತ್ತೂರಿನ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೆಸರನ್ನು ಎಳೆತರುತ್ತಿರುವುದನ್ನು ಖಂಡಿಸಿರುವ ‘ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ’, ಇಂತಹ ಷಡ್ಯಂತ್ರದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ. ಬುಧವಾರ ಸಮಿತಿಯ ಸದಸ್ಯರು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.

ಪಿ.ಜಿ. ಜಗನ್ನಿವಾಸ ರಾವ್ ಹಾಗೂ ಸಂತ್ರಸ್ತೆಯ ಕುಟುಂಬದ ನಡುವಿನ ವ್ಯಾಜ್ಯ ಈಗಾಗಲೇ ನ್ಯಾಯಾಲಯದಲ್ಲಿದೆ. ಆದರೆ ಈ ವಿಚಾರವನ್ನು ದೇವಳದ ಧ್ವಜಸ್ತಂಭದ ಬಳಿ ತಂದು ಪ್ರತಿಭಟನೆ ನಡೆಸಲು ಮುಂದಾಗಿರುವುದು ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡುವ ಪ್ರಯತ್ನವಾಗಿದೆ. ದೇವಸ್ಥಾನವು ಹಿಂದೂಗಳ ಆರಾಧನಾ ಕೇಂದ್ರವೇ ಹೊರತು ಹಕ್ಕೊತ್ತಾಯ ಮಾಡುವ ಜಾಗವಲ್ಲ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಜಾತ್ರೋತ್ಸವದ ಧ್ವಜಾರೋಹಣದ ಸಂದರ್ಭದಲ್ಲಿ ಯಾರೇ ಪ್ರತಿಭಟನೆಗೆ ಮುಂದಾದರೂ ಅವರಿಗೆ ಅವಕಾಶ ನೀಡುವುದಿಲ್ಲ. ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರನ್ನು ಧ್ವಜಸ್ತಂಭದ ಬಳಿಯಿಂದ ಎಳೆದುಕೊಂಡು ಬಂದು ಹೊರಹಾಕಲಾಗುವುದು ಎಂದು ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ. ಅಹಿತಕರ ಘಟನೆಗಳನ್ನು ತಡೆಯಲು ಅಂತಹ ವ್ಯಕ್ತಿಗಳಿಗೆ ದೇವಳದ ಒಳಗೆ ಪ್ರವೇಶ ನೀಡಬಾರದು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ.